ಬೆಂಗಳೂರು: ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ 7 ನೇ ವಾರ್ಷಿಕೋತ್ಸವ ಸಮಾರಂಭವನ್ನು ಜಾನಪದ ಕಲಾವಿದ ಗುರುರಾಜ್ ಹೊಸಕೋಟೆ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜನರ ಸೇವೆ ಮಾಡವುದನ್ನು ಎಲ್ಲ ರಾಜಕೀಯ ಪಕ್ಷಗಳು ಮರೆತಿವೆ. ಈ ಹಿನ್ನೆಲೆಯಲ್ಲಿ ಹೊಸ ಪಕ್ಷದ ಹುಡುಕಾಟದಲ್ಲಿ ಜನರು ಇದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ಪಕ್ಷವಾಗಿ ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ ಕೆಲಸ ಮಾಡಲಿ ಎಂದರು.
ಪ್ರಜೆಗಳಿಂದ ಪ್ರಜೆಗಳಿಗಾಗಿ ಕೆಲಸ ಮಾಡುವುದೇ ಪ್ರಜಾಪ್ರಭುತ್ವ. ಪ್ರಜೆಗಳ ಕಲ್ಯಾಣವೇ ಎಲ್ಲ ರಾಜಕೀಯ ಪಕ್ಷದ ಧ್ಯೇಯವಾಗಬೇಕು. ಈ ಪಕ್ಷ ಹೆಸರಿನಲ್ಲಿ ಕಲ್ಯಾಣದ ಧ್ಯೇಯ ಇಟ್ಟುಕೊಂಡಿರುವ ಕಾರಣದಿಂದ ಇದು ದೊಡ್ಡ ಮಟ್ಟದಲ್ಲಿ ಬೆಳೆಯಲಿದೆ ಎಂದು ತಿಳಿಸಿದರು.
ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ರಾಜ್ಯಾಧ್ಯಕ್ಷ ರಾಮಚಂದ್ರ ಕುಲಕರ್ಣಿ ಮಾತನಾಡಿ, ನಮ್ಮ ಪಕ್ಷ ರಾಷ್ಟ್ರೀಯ ಪಕ್ಷವಾಗಿದ್ದು, ಮುಂದೊಂದು ದಿನ ನಾವು ಅಧಿಕಾರ ಪಡೆಯುವ ನಿಟ್ಟಿನಲ್ಲಿ ಯಶಸ್ವಿಯಾಗುತ್ತೇವೆ. ಆ ನಿಟ್ಟಿನಲ್ಲಿ ಸಂಘಟನೆ ಸಾಗುತ್ತಿದೆ ಎಂದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಸತೀಶ್ ರೆಡ್ಡಿ, ಆರ್.ಕೆ. ಗ್ರೂಪ್ಸ್ ಡೆವಲಪರ್ಸ್ ಮಾಲೀಕರಾದ ಆರ್.ಕುಮಾರ್, ದೂರದರ್ಶನ ಕೇಂದ್ರದ ವಿಶ್ರಾಂತ ಸಂಕಲನಕಾರ ಎಂ.ಎನ್.ರವೀಂದ್ರರಾವ್, ಮಧುಸೂದನ್ ಹವಾಲ್ದಾರ್, ರುದ್ರಪ್ಪ ಮಹಾಲಿಂಗಪುರ, ಪತ್ರಕರ್ತ ಗಂಡಸಿ ಸದಾನಂದ, ಲಕ್ಷ್ಮಣ್ ಬಡಕಲ್ ಸೇರಿ ಗಣ್ಯರು ಭಾಗವಹಿಸಿದ್ದರು.