ಲೋಕಾಯುಕ್ತ ವಿಚಾರಣೆ ಎದುರಿಸಿದ ಸಿಎಂ: ಎಲ್ಲ ಪ್ರಶ್ನೆಗೂ ಉತ್ತರ ಉತ್ತರಿಸಿದ್ದೇನೆ ಎಂದ ಸಿದ್ದರಾಮಯ್ಯ
ಮೈಸೂರು: ಮುಡಾ ಸೈಟ್ ಹಂಚಿಕೆ ಪ್ರಕರಣದ ಎ1 ಆಗಿರುವ ಸಿಎಂ ಸಿದ್ದರಾಮಯ್ಯ ಇಂದು ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಿದರು.
ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿಗಳನ್ನು ಸುಮಾರು 2 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದರು. ಇಂದು ಬೆಳಗ್ಗೆ ಮೈಸೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಸರಿಯಾಗಿ ಬೆಳಗ್ಗೆ 10 ಗಂಟೆಗೆ ಲೋಕಾಯುಕ್ತ ಕಚೇರಿಗೆ ಖಾಸಗಿ ವಾಹನದಲ್ಲಿ ತಲುಪಿದರು.
ಲೋಕಾಯುಕ್ತ ಪೊಲೀಸರ ವಿಚಾರಣೆಗೆ ಹಾಜರಾಗುವ ಮುನ್ನ ಸಿಎಂ ಸಿದ್ದರಾಮಯ್ಯ ಕಾನೂನು ಸಲಹೆಗಾರ ಜೊತೆ ಸಭೆ ನಡಸಿದ್ದರು. ಸರ್ಕಾರಿ ಕಾರಿನಲ್ಲಿ, ಬೆಂಗಾವಲು ವಾಹನದಲ್ಲಿ ವಿಚಾರಣೆಗೆ ಬರಲು ಸಿಎಂ ಸಜ್ಜಾಗಿದ್ದರು.
ಆದರೆ, ಕಾನೂನು ಸಲಹೆಗಾರು ನೀಡಿದ ಸಲಹೆಯಂತೆ ಸರ್ಕಾರಿ ಸವಲತ್ತು ಬಳಸದೇ, ಸರ್ಕಾರಿ ಕಾರನ್ನೂ ಬಳಸದೇ ತಮ್ಮ ಸಿಬ್ಬಂದಿಯನ್ನೂ ಜೊತೆಗೆ ಕರೆ ತರದೇ ಸಿಎಂ ಸಿದ್ದರಾಮಯ್ಯ ಸಾಮಾನ್ಯರಂತೆ ಬಂದರು.
ವಿಚಾರಣೆ ಎದುರಿಸಲು ಕಚೇರಿಯೊಳಗೆ ಬಂದ ಸಿಎಂ ಸಿದ್ದರಾಮಯ್ಯ, ಮೊದಲಿಗೆ ಅನೌಪಚಾರಿಕವಾಗಿ ಎಸ್ಪಿ ಉದೇಶ್ ಜೊತೆ ಮಾತನಾಡಿದರು. ನಾನು ಸಿಎಂ ಎಂದು ಅಂಜಿಕೆ ಇಟ್ಟುಕೊಳ್ಳಬೇಡಿ, ಸಂಕೋಚ ಇಲ್ಲದೇ ವಿಚಾರಣೆ ಮಾಡಿ ಎಂದು ಸಲಹೆ ನೀಡಿದರು.
ಯಾವುದೇ ಟೆನ್ಷನ್ ಇಲ್ಲದೆ ವಿಚಾರಣೆ ಎದುರಿಸಿದ್ದೇನೆ. ಲೋಕಾಯುಕ್ತ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿದ್ದೇನೆ. ನನ್ನ ಉತ್ತರಗಳನ್ನು ಅವರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಮತ್ತೆ ವಿಚಾರಣೆಗೆ ಬರುವಂತೆ ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.


