ಸುದ್ದಿ

ಅನ್ನದಾನೇಶ್ವರ ಮಠದ ಆಸ್ತಿಯಲ್ಲೂ ವಕ್ಫ್ ಹೆಸರು: ಜಿಲ್ಲಾಡಳಿತ ವಿರುದ್ಧ ಆಕ್ರೋಶ

Share It

ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಪ್ರಸಿದ್ಧ ಅನ್ನದಾನೇಶ್ವರ ಮಠದ ಆಸ್ತಿಯಲ್ಲೂ ವಕ್ಫ್ ಹೆಸರು ನಮೂದಾಗಿರುವುದು ಬೆಳಕಿಗೆ ಬಂದಿದೆ.

ಅನ್ನದಾನೇಶ್ವರ ಮಠದ ಪಹಣಿ ತೆಗೆಸಿ ನೋಡಿದಾಗ ಭಕ್ತರು ಕಂಗಾಲಾಗಿದ್ದಾರೆ. 2019-20 ಬಿಜೆಪಿ ಸರ್ಕಾರದ ಅವಧಿಯಲ್ಲೇ ಮಠದ ಆಸ್ತಿಯಲ್ಲಿ ವಕ್ಫ್ ಹೆಸರು ಸೇರ್ಪಡೆಯಾಗಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಹಾಲಕೇರಿ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಹಣಿ ಬದಲಾವಣೆ ಮಾಡಿದ ಜಿಲ್ಲಾಡಳಿತ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಸರ್ವ ಸಮಾಜದವರು ಅಂತ್ಯಕ್ರಿಯೆ ನೆರವೇರಿಸುವ ಸ್ಮಶಾನ ಜಾಗ ಹಾಗೂ ರೈತರ ಸುಮಾರು 50 ಎಕರೆ ಜಮೀನು ಪಹಣಿಯಲ್ಲಿ ವಕ್ಫ್ ಹೆಸರು ಕಂಡುಬಂದಿದೆ.

ಮಠದ ಪ್ರಸಾದ ನಿಲಯದ 11.19 ಎಕರೆ ಆಸ್ತಿ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದೆ.
ಸರ್ವೇ ನಂಬರ್ 410/2ಬಿ 15 ಎಕರೆ 6 ಗುಂಟೆ ಜಮೀನು ದಾನವಾಗಿ ಮಠಕ್ಕೆ ಬಂದಿತ್ತು. 15 ಎಕರೆ ಆಸ್ತಿ ಪೈಕಿ 11 ಎಕರೆ 19 ಗುಂಟೆ ಆಸ್ತಿಯಲ್ಲಿ ವಕ್ಫ್ ಅಂತ ನಮೂದಾಗಿದೆ. ಮಠದ ಆಸ್ತಿ ಉತಾರದಲ್ಲಿ ರೆಹಮಾನ್ ಶಾವಲಿ ದರ್ಗಾ ವಕ್ಫ್ ಆಸ್ತಿ ಅಂತ ಸೇರ್ಪಡೆಯಾಗಿದೆ.

ಮಠದ ಉಚಿತ ಪ್ರಸಾದ ನಿಲಯದ ಹೆಸರಲ್ಲಿ ಕೇವಲ 3 ಎಕರೆ 27 ಗುಂಟೆ ನಮೂದಾಗಿದೆ. ನೋಟಿಸ್ ನೀಡದೇ ಏಕಾಏಕಿ ವಕ್ಫ್ ಹೆಸರು ಉಲ್ಲೇಖಿಸಿದ್ದಕ್ಕೆ ಶ್ರೀಗಳು, ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಕ್ಫ್ ಕಾನೂನು ಮರುಪರಿಶೀಲನೆಗೆ ಒತ್ತಾಯಿಸಿದ್ದಾರೆ. ಜತೆಗೆ, ಮಠದ ಆಸ್ತಿ ಮರಳಿ ಬಿಟ್ಟು ಕೊಡುವಂತೆ ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ. ಸರ್ಕಾರ ಕೂಡಲೇ ಮಠದ ಆಸ್ತಿ ಮಠಕ್ಕೆ ಬದಲಾಯಿಸಬೇಕು, ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಗದಗ ಜಿಲ್ಲೆಯ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದ ಹುಣಸೀಕಟ್ಟಿ ರಸ್ತೆಗೆ ಹೊಂದಿಕೊಂಡಿರುವ ಸ್ಮಶಾನದ ಜಾಗದ ಪಹಣಿಯಲ್ಲಿಯೂ ವಕ್ಫ್ ಹೆಸರು ನಮೂದಾಗಿದೆ. ಸರ್ವೇ ನಂ-113ರ 4 ಎಕರೆ 1 ಗುಂಟೆ ಜಮೀನು ಕಂದಾಯ ಇಲಾಖೆಯ ಸ್ಮಶಾನ ಭೂಮಿಯಲ್ಲಿ ವಕ್ಫ್ ಹೆಸರು ನಮೂದಾಗಿದೆ. ಈ ಸ್ಮಶಾನದಲ್ಲಿ ಹಿಂದೂ ಮುಸ್ಲಿಮರು ಸೇರಿ ಎಲ್ಲ ಜನಾಂಗದವರು ಶವಸಂಸ್ಕಾರ ನೆರವೇರಿಸುತ್ತಿದ್ದರು.

1975ರಿಂದ 2019ರ ವರೆಗೆ ಈ ಕಾರ್ಯ ನಿರ್ವಿಘ್ನವಾಗಿ ನಡೆದುಕೊಂಡು ಬಂದಿತ್ತು . ಆದರೀಗ ಕಂದಾಯ ಇಲಾಖೆಯ ಸ್ಮಶಾನ ಪಹಣಿಯಲ್ಲಿ 2019ರಿಂದ ‘ಚಿಕ್ಕನರಗುಂದ ಮಕಾನ ವಕ್ಫ್ ಆಸ್ತಿ’ ಎಂದು ನಮೂದಾಗಿದೆ. ಇದರಿಂದ ಶವಸಂಸ್ಕಾರ ಮಾಡಲು ಜಾಗವಿಲ್ಲದ ಪರಿಸ್ಥಿತಿ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಈ ಸಮಸ್ಯೆ ಬಗೆಹರಿಸುವಂತೆ ಸರ್ಕಾರವನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ರೈತರ 50 ಎಕರೆ ಜಮೀನು ಪಹಣಿಯಲ್ಲೂ ವಕ್ಫ್ ಹೆಸರು: ಲಕ್ಷ್ಮೇಶ್ವರ ಪಟ್ಟಣದ ದೇಸಾಯಿ ಬಣದ ರೈತರ 50 ಎಕರೆ ಜಮೀನು ಪಹಣಿಯಲ್ಲಿಯೂ ವಕ್ಫ್ ಹೆಸರು ನಮೂದಾಗಿದೆ. 2018 ರಲ್ಲಿ ಪಹಣಿಯಲ್ಲಿ ಹೆಸರು ಬದಲಾವಣೆ ಮಾಡಲಾಗಿದೆ ಎಂದು ರೈತರು ಆರೋಪಿಸಿದ್ದು, ಪಟ್ಟಣದ ಸರ್ವೆ ನಂಬರ್ 256/257ರ 50 ಎಕರೆ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ಉಲ್ಲೇಖಿಸಲಾಗಿದೆ ಎಂದಿದ್ದಾರೆ.


Share It

You cannot copy content of this page