ಹೊಸದಿಲ್ಲಿ: ಆಫ್ರಿಕಾ ಮೂಲದ ಮಹಿಳೆಯ ಹೊಟ್ಟೆಯಲ್ಲಿದ್ದ ಫುಟ್ ಬಾಲ್ ಗಾತ್ರದ ಗೆಡ್ಡೆಯೊಂದನ್ನು ಆಪರೇಷನ್ ಮೂಲಕ ಹೊರತೆದಿದ್ದು, ಇದೊಂದು ವೈದ್ಯಕೀಯ ವಿಸ್ಮಯ ಎನಿಸಿಕೊಂಡಿದೆ.
ಗುರಗಾಂವ್ ನ ಸೆಕ್ಟರ್ 44 ರ ಖಾಸಗಿ ಆಸ್ಪತ್ರೆಗೆ ಆಫ್ರಿಕಾ ಮೂಲದ ಮಹಿಳೆ ದಾಖಲಾಗಿದ್ದರು. ಅವರಿಗೆ ಏರೇಳು ತಿಂಗಳಿಂದ ಹೊಟ್ಟೆಯಲ್ಲಿ ನೋವು ಕಾಣಿಸಿಲೊಂಡಿತ್ತು ಎಂಬ ಆಧಾರದ ಮೇಲೆ ವೈದ್ಯರು ಆಪರೇಷನ್ ನಡೆಸಿದ್ದರು. ಈ ವೇಳೆ 9.1 ಕೆ.ಜಿ.ತೂಕದ ಗಡ್ಡೆಯೊಂದು ಪತ್ತೆಯಾಗಿದೆ.
ಆಫ್ರಿಕಾದ ಅನೇಕ ಆಸ್ಪತ್ರೆಗಳಲ್ಲಿ ಈ ಗಡ್ಡೆಯನ್ನು ಪತ್ತೆಹಚ್ಚುವ ಕಾರ್ಯದಲ್ಲಿ ವಿಫಲತೆ ಕಂಡಿತು. ಹೀಗಾಗಿ, ನಗರದ ಪೋರ್ಟಿಸ್ ಆಸ್ಪತ್ರೆಯ ಜಠರ ವಿಭಾಗದ ವೈದ್ಯರು ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ, ಆಪರೇಷನ್ ನಡೆಸಿ, ಗಡ್ಡೆಯನ್ನು ತೆರವುಗೊಳಿಸಿದ್ದಾರೆ.
ಡಾ. ಜಾವೇದ್ ನೇತ್ರತ್ವದಲ್ಲಿ ನಡೆದ ಆಪರೇಷನದ ಪ್ರಕ್ರಿಯೆ ನಾಲ್ಕು ಗಂಟೆಗಳ ಕಾಲ ನಡೆದಿದ್ದು, ರೋಗಿ ಇದೀಗ ನಾಲ್ಕು ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ತಮ್ಮ ನೋವಿನ ಅನಿಭವ ಕಡಿಮೆಯಾಗಿರುವ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.
ಕರುಳು ಮತ್ತು ಜಠರದ ನಡುವೆ ಈ ಗಡ್ಡೆ ಬೆಳೆದಿದ್ದು, ಇದನ್ನು ಪತ್ತೆ ಹಚ್ಚುವುದು ಮತ್ತು ಇತರೆ ಪ್ರಮುಖ ಅಂಗಗಳ ಜತೆಗೆ ಗಡ್ಡೆ ಬೆಸೆದುಕೊಂಡಿರುವುದನ್ನು ಗಮನಿಸುವುದು ಸವಾಲಾಗಿತ್ತು. ಸಿಟಿ ಸ್ಕಾನ್ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸಿ, ಹೆಚ್ಚಿನ ರಕ್ತಸ್ರಾವದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಆಪರೇಷನ್ ನಡೆಸಲಾಯಿತು. ಅಂತೂ ನಾವು ಆಕೆಯ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ವೈದ್ಯರು ಸಂತಸ ಹಂಚಿಕೊಂಡಿದ್ದಾರೆ.
ಇದೊಂದು ಅಪರೂಪದ ಗಡ್ಡೆಯಾಗಿದ್ದು, ವೈದ್ಯಕೀಯ ಪರಿಭಾಷೆಯಲ್ಲಿ ಇದಕ್ಕೆ ಯಾವುದೇ ಹೆಸರು ಕೊಟ್ಟಿಲ್ಲ. ಇದೊಂದು ರೀತಿಯ ಕ್ಯಾನ್ಸರ್ ಆಗಿದ್ದು, ರಕ್ತ ಸರಬರಾಜು ಮಾಡುವ ಅಪದಮನಿ, ಅಭಿದಮನಿಗಳಿಗೆ ಹಾನಿ ಮಾಡುವ ಸಾಧ್ಯತೆಯಿತ್ತು. ಹಾಗಾಗಿದ್ದಲ್ಲಿ ಗಡ್ಡೆ ಮಾರಣಾಂತಿಕವಾಗುವ ಅಪಾಯವೂ ಇತ್ತು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ