ಕೋಲಾರ; ಮೂರಂತಸ್ತಿನ ಕಟ್ಟಡ ಕುಸಿತ: ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಕೋಲಾರ: ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಮೂರಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದ್ದು, ಪೊಲೀಸರು ಹಾಗೂ ಕೆಇಬಿ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ ಎನ್ನಲಾಗಿದೆ.
ಬಂಗಾರಪೇಟೆ ಪಟ್ಟಣದ ಕೆಇಬಿ ರಸ್ತೆಯಲ್ಲಿರುವ ಬೂದಿಕೋಟೆ ನಾಗರಾಜ್ ಎಂಬುವವರ ಕಟ್ಟಡ ಇದ್ದಕ್ಕಿದ್ದಂತೆ ವಾಕಿಕೊಂಡಿತ್ತು. ಈ ಮಾಹಿತಿ ಸಿಗುತ್ತಿದ್ದಂತೆ ಸಾರ್ವಜನಿಕರು ಗಾಬರಿಗೊಂಡು ಮನೆಗಳಿಂದ ಆಚೆಗೆ ಬಂದಿದ್ದರು. ಕಟ್ಟಡದಲ್ಲಿ ವಾಸವಿದ್ದವರೆಲ್ಲ ಹೊರಗೆ ಓಡಿಬಂದಿದ್ದರು.
ಸ್ಥಳಕ್ಕೆ ಆಗಮಿಸಿದ ಪೋಲೀಸರು, ಅಕ್ಕಪಕ್ಕದ ಮನೆಗಳ ಜನರನ್ನು ಹೊರಗೆ ಕಳಿಹಿಸಿ, ಬ್ಯಾರಿಕೇಡ್ ಹಾಕಿ ಯಾವುದೇ ಅಪಾಯ ಆಗದಂತೆ ತಡೆದರು. ಈ ಸಂದರ್ಭದಲ್ಲಿ ಕೆಇಬಿ ಅಧಿಕಾರಿಗಳು ವಿದ್ಯುತ್ ವ್ಯವಸ್ಥೆ ಸ್ಥಗಿತಗೊಳಿಸಿದ್ದು, ಯಾವುದೇ ವಿದ್ಯುತ್ ಅವಘಡ ಸಂಭವಿಸದಂತೆ ತಡೆಯಲಾಗಿದೆ.
ಕಟ್ಟಡ ಧರೆಗುರುಳಲು ಕಾರಣವೇನು ಎಂಬ ಬಗ್ಗೆ ಪೊಲೀಸರು ಮಾಲೀಕರನ್ನು ವಿಚಾರಣೆ ನಡೆಸುತ್ತಿದ್ದು, ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಬಂಗಾರಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


