ಬೆಂಗಳೂರು: ಅನಧಿಕೃತ ಶಾಲೆಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ವಿಫಲವಾಗಿರುವ ಬೆಂಗಳೂರು ಉತ್ತರ ಜಿಲ್ಲಾDDPI ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಇಂಗ್ಲೀಷ್ ಮಾಧ್ಯಮ ಖಾಸಗಿ ಶಾಲೆಗಳ ಒಕ್ಕೂಟದಿಂದಲೇ ಈ ದೂರು ದಾಖಲಾಗಿದ್ದು, ಅನಧಿಕೃತ ಶಾಲೆಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸರಕಾರ ಮತ್ತು ನ್ಯಾಯಾಲಯ ಆದೇಶ ನೀಡಿದ್ದರೂ, ಆದಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ ಎಂದು ದೂರು ನೀಡಲಾಗಿದೆ.
ಕೆಲವು ಶಾಲೆಗಳು ಅನಧಿಕೃತ ಕಟ್ಟಡ ನಿರ್ಮಾಣ ಮಾಡಿರುವುದು, ನಿಯಮ ಉಲ್ಲಂಘನೆ ಮಾಡಿರುವುದಕ್ಜೆ ಕೆಲವು ಸಾಕ್ಷ್ಯಗಳನ್ನು ಒದಗಿಸಲಾಗಿದೆ. ಆದರೂ ಅಧಿಕಾರಿಗಳು ನಿಯಮಬಾಹಿರವಾಗಿ ಕೆಲ ಶಾಲೆಗಳಿಗೆ ಅನುಮತಿ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹೊಸದಾಗಿ ಶಾಲೆಗೆ ಅನುಮತಿ ನೀಡಲು 57 ಮಾನದಂಡಗಳನ್ನು ಅನುಸರಿಸಬೇಕು. ಪಾರದರ್ಶನವಾಗಿ ಪರಿಶೀಲನೆ ನಡೆಸಿ, ಆನ್ ಲೈನ್ ಮೂಲಕವೇ ಅರ್ಜಿ ಪಡೆದು, ದಾಖಲೆಗಳನ್ನು ಪರಿಶೀಲನೆ ನಡೆಸಿ, ಅನುಮತಿ ನೀಡಬೇಕು. ಆದರೆ, ಕೆಲವು ಶಾಲೆಗಳಿಗೆ ಐದೇ ದಿನದಲ್ಲಿ ಅನುಮತಿ ಸಿಕ್ಕಿದೆ.
30*40 ಅಡಿ ವಿಸ್ತೀರ್ಣದ ಶಾಲೆಗೆ ಅನುಮತಿ ನೀಡಿದ್ದಾರೆ. ಅನಧಿಕೃತ ಶಾಲೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಅವಕಾಶವಿದ್ದು, ಈವರೆಗೆ ಯಾರ ವಿರುದ್ಧ ಸೂಕ್ತ ಕ್ರಮವಾಗಿಲ್ಲ. ಸರಕಾರ ಜಾರಿಗೆ ತಂದಿರುವ ಕಟ್ಟುನಿಟ್ಟಿನ ಕ್ರಮಗಳನ್ನೇ ಬಂಡವಾಳವಾಗಿ ಮಾಡಿಕೊಂಡು ಅಕ್ರಮ ನಡೆಸಿದ್ದಾರೆ ಎನ್ನಲಾಗಿದೆ.
ಕೋಟ್:
2018ಕ್ಕೆ ಮೊದಲು ಬೇಕಾಬಿಟ್ಟಿ ಅನುಮತಿ ನೀಡಲಾಗಿದೆ. ಇದನ್ನು ಸರಿಪಡಿಸುವಂತೆ ಶಿಕ್ಷಣ ಸಚಿವರಿಗೆ, ಆಯುಕ್ತರಿಗೆ ಮನವಿ ಮಾಡಲಾಗಿದ್ದು, ಯಾವುದೇ ಕ್ರಮವಾಗಿಲ್ಲ. ಹೀಗಾಗಿ, ಸೂಕ್ತ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಹಾಗೂ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳಿಗೆ ದೂರು ನೀಡಲಾಗಿದೆ.
- ಶಶಿಕುಮಾರ್ ಡಿ.,
ಪ್ರಧಾನ ಕಾರ್ಯದರ್ಶಿ, - ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟ