ಬೆಂಗಳೂರು: ಭಾರತದ ದೈತ್ಯ ಆಹಾರ ಮತ್ತು ದಿನಸಿ ಸರಬರಾಜು ಕಂಪನಿ ಸ್ವಿಗ್ಗಿ ಷೇರು ಮಾರುಕಟ್ಟೆ ಪ್ರವೇಶಿಸಿದ್ದು, ಪ್ರತಿಸ್ಪರ್ಧಿ ಜೊಮೋಟೋ ಈ ಕುರಿತು ಖುಷಿ ಹಂಚಿಕೊಂಡಿದೆ. ಇದು ಸೋಷಿಯಲ್ ಮೀಡಿಯಾ ಟ್ರೆಂಡ್ ಆಗುತ್ತಿದೆ.
ಸ್ವಿಗ್ಗಿ ಷೇರು ಮಾರುಕಟ್ಟೆ ಪ್ರವೇಶ ಮಾಡಿದ ಗಳಿಗೆಯನ್ನು ಜೊಮೋಟೋ ಆನಂದದಿಂದ ಅಭಿನಂದಿಸಿದೆ. ಮುಂಬಯಿಯ ಷೇರು ಮಾರುಕಟ್ಟೆ ಕಟ್ಟಡದ ಹೊರಗೆ ಸ್ವಿಗ್ಗಿ ಮತ್ತು ಜೊಮೋಟೋ ಡೆಲಿವರಿ ಬಾಯ್ಸ್ ಒಬ್ಬ ಹೆಗಲಮೇಲೊಬ್ಬರು ಕೈ ಹಾಕಿರುವ ಫೋಟೋ ಶೇರ್ ಮಾಡಿ, ‘you and I…in this beautiful world’ ಎಂದು ಜೊಮೋಟೋ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದೆ.
ಈ ಟ್ವಿಟ್ ಅನ್ನು ಜೊಮೋಟೋ ಸಿಇಒ ದೀಪೇಂದರ್ ಗೋಯಲ್ ಸ್ವತಃ ಶೇರ್ ಮಾಡಿ, ಅಭಿನಂದನೆ ಹೇಳಿದ್ದಾರೆ. ಈ ಎರಡು ದೈತ್ಯ ಪ್ರತಿಸ್ಪರ್ಧಿ ಸಂಸ್ಥೆಗಳು ತಮ್ಮತಮ್ಮಲ್ಲಿ ಅಭಿನಂದನೆ ಸಲ್ಲಿಸಿರುವುದನ್ನು ನೆಟ್ಟಿಗರು ಮೆಚ್ಚಿ ಕೊಂಡಾಡಿದ್ದಾರೆ. ಕೆಲವರು ವಿಲೀನವಾಗುವ ಸಂಕೇತವಾ ಎಂದು ಕಾಲೆಳೆಯುವ ಕೆಲಸವನ್ನು ಮಾಡಿದ್ದಾರೆ.
ಸ್ವಿಗ್ಗಿ ಸಂಸ್ಥೆಯ ಷೇರುಗಳು 420 ರು.ಗಳ ಆರಂಭಿಕ ಬೆಲೆಯ ಪಟ್ಟೊಯೊಳಗೆ ಸ್ಥಾನ ಪಡೆದುಕೊಂಡಿತ್ತು. 390 ರಿಂದ ಪ್ರಾರಂಭವಾದ ವಹಿವಾಟು 412 ಕ್ಕೆ ಕೊನೆಗೊಂಡು, ಶೇ. 5.6 ರಷ್ಟು ಪ್ರಗತಿ ಸಾಧಿಸಿದ್ದು ಗಮನಾರ್ಹ ಸಂಗತಿಯಾಗಿದೆ. ಸ್ವಿಗ್ಗಿಯ ಹೂಡಿಕೆ 89,549.08 ಕೋಟಿಯಾಗಿತ್ತು.