ಬೆಂಗಳೂರು: ರಾಜ್ಯದ 3 ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲುತ್ತದೆ, ಇನ್ನು ಮುಂದೆ ಯಾವುದೇ ಚುನಾವಣೆಗಳು ನಡೆಯಲಿ ಬಿಜೆಪಿ & ಜೆಡಿಎಸ್ ಗೆಲ್ಲುತ್ತವೆ. ಜೆಡಿಎಸ್- ಬಿಜೆಪಿ ಮೈತ್ರಿ ಇರುವವರೆಗೆ ಕಾಂಗ್ರೆಸ್ ಗೆ ರಾಜ್ಯದಲ್ಲಿ ಉಳಿಗಾಲವಿಲ್ಲ ಎಂದು ಒಂದು ಕಾಲದಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತರಾಗಿದ್ದ ಕಾಂಗ್ರೆಸ್ ಮುಖಂಡ ಪಿ.ರಮೇಶ್ ಭವಿಷ್ಯ ನುಡಿದಿದ್ದಾರೆ.
ಉಪಚುನಾವಣೆಗಳ ಗೆಲುವಂತೂ ಕಾಂಗ್ರೆಸ್ ಪಾಲಿಗೆ ದೂರದ ಮಾತು. ಇನ್ನು ಮುಂದೆ ಬರುವ ಬಿಬಿಎಂಪಿ ಚುನಾವಣೆ, ತಾಲೂಕು ಪಂಚಾಯತ್ ಹಾಗೂ ಜಿಲ್ಲ ಪಂಚಾಯತ್ ಚುನಾವಣೆಗಳಲ್ಲಿಯೂ ಮೈತ್ರಿಯೇ ಮೇಲುಗೈ ಸಾಧಿಸಲಿದೆ. ಅಷ್ಟರಮಟ್ಟಿಗೆ ರಾಜ್ಯದಲ್ಲಿ ಮೈತ್ರಿ ಯಶಸ್ವಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
2028-29 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ 40-50 ಕ್ಷೇತ್ರಗಳಲ್ಲಿ ಗೆಲ್ಲುವುದಕ್ಕೆ ಬಹಳ ಸಾಹಸ ಮಾಡಬೇಕು. ಈಗಿನ ಕಾಂಗ್ರೆಸ್ ಮುಖಂಡರ ವರ್ತನೆ, ದುರಹಂಕಾರ, ದೇಶ ವಿಭಜನೆ ಮನಸ್ಥಿತಿ,ಮಿತಿಮೀರಿದ ಭ್ರಷ್ಟಚಾರ & ಹಿಂದೂ ವಿರೋಧಿ ನೀತಿಗಳೇ ಇದಕ್ಕೆ ಕಾರಣ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಹಿಂದೆ ಹೀಗಿರಲಿಲ್ಲ, ಅವರು ತಮ್ಮ ರಾಜಕೀಯ ಜೀವನದ ಕೊನೆಯ ಘಟ್ಟದಲ್ಲಿ ಕೆಟ್ಟ ಹೆಸರು ತಂದುಕೊಳ್ಳುತ್ತಿದ್ದಾರೆ. ಸುತ್ತಲೂ ಭಟ್ಟಂಗಿಗಳನ್ನು ಇಟ್ಟುಕೊಂಡು ಅಧಿಕಾರ ನಡೆಸುತ್ತಿದ್ದು, ಅವರಿಂದಲೇ ಅನೇಕ ಆರೋಪಿಗಳನ್ನು ತಲೆಗೆ ಮೆತ್ತಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪಿ. ರಮೇಶ್, 2013 ರಿಂದ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಅವರ ಆಪ್ತವಲಯದಲ್ಲಿದ್ದರು. ಸಿ.ವಿ. ರಾಮನ್ ನಗರ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಮುಂದಿನ ಬೆಳವಣಿಗೆಯಲ್ಲಿ ಪಕ್ಷದಿಂದ ದೂರ ಉಳಿದಿದ್ದಾರೆ. ಇದೀಗ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.