‘ವಾರಗಿತ್ತಿಯರ ನಡುವಿನ ವಾರ್ : ಕೌಟುಂಬಿಕ ದೌರ್ಜನ್ಯ ಎಂದ ಹೈಕೋರ್ಟ್
ಪತಿಯ ಸಂಬಂಧಿಕರಿಂದ ದೇಹ ಸೌಂದರ್ಯ ಕುರಿತ ಅವಹೇಳನವೂ ಕೌಟುಂಬಿಕ ದೌರ್ಜನ್ಯಕ್ಕೆ ಸಮ
ಬೆಂಗಳೂರು : ಮದುವೆಯಾಗಿ ಬಂದ ಮನೆಯಲ್ಲಿ ಮಹಿಳೆಯ ದೇಹಸೌಂದರ್ಯದ ಕುರಿತು ಮಾಡುವ ಅವಮಾನವೂ ವರದಕ್ಷಿಣೆ ಕಿರುಕುಳದ ವ್ಯಾಪ್ತಿಗೆ ಬರುತ್ತದೆ ಎಂದು ಕೇರಳ ಹೈಕೋರ್ಟ್ ತಿಳಿಸಿದೆ.
ಗಂಡನ ಮನೆಯಲ್ಲಿ ಅತ್ತೆ, ಮಾವ ಹಾಗೂ ಆತನ ಸಂಬಂಧಿಕರು ಸೊಸೆಯನ್ನು ದೇಹ ಸೌಂದರ್ಯದ ಕಾರಣಕ್ಕೆ ಅವಹೇಳನ ಮಾಡಿದರೆ, ಅದು ಕೌಟುಂಬಿಕ ದೌರ್ಜನ್ಯಕ್ಕೆ ಸಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೇರಳದ ಕಣ್ಣೂರು ವ್ಯಾಪ್ತಿಯ ಕೂತುಪರಂಬು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ IPC 498 ಎ ಅಡಿಯಲ್ಲಿ ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ದೂರುದಾರರ ವಾರಗಿತ್ತಿ ಮಾಡಿದ್ದ ಮನವಿ ವಜಾಗೊಳಿಸಿದ ಹೈಕೋರ್ಟ್, ಪತಿ ಹಾಗೂ ಆತನ ಸಂಬಂಧಿಕರು ಮಾಡುವ ದೇಹ ನಿಂದನೆ ಕೂಡ ಕೌಟುಂಬಿಕ ದೌರ್ಜನ್ಯಕ್ಕೆ ಸಮ ಎಂದಿದೆ.
ಪ್ರಕರಣದಲ್ಲಿ ದೂರುದಾರೆಯ ಪತಿ, ಆತನ ತಂದೆ ಹಾಗೂ ಅಣ್ಣನ ಹೆಂಡತಿ ಆಕೆಯ ದೇಹ ಸೌಂದರ್ಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಅಂಶವನ್ನು ಉಲ್ಲೇಖ ಮಾಡಲಾಗಿತ್ತು. ಇದನ್ನು ಅಲ್ಲಗಳೆದು ಪ್ರಕರಣ ರದ್ದುಗೊಳಿಸುವಂತೆ ಪತಿಯ ಅಣ್ಣನ ಹೆಂಡತಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಬದ್ರುದ್ದೀನ್ ಅವರಿದ್ದ ಪೀಠ, ಅರ್ಜಿಯನ್ನು ವಜಾಗೊಳಿಸಿತು. ಅರ್ಜಿದಾರರು ಸಂತ್ರಸ್ತೆಯ ವೈದ್ಯಕೀಯ ಪದವಿಯನ್ನು ಅನುಮಾನಿಸಿದ್ದು ಹಾಗೂ ಇದರ ಬಗ್ಗೆ ಪರಿಶೀಲನೆ ನಡೆಸುವಂತೆ ಅತ್ತೆಗೆ ಶಿಫಾರಸ್ಸು ಮಾಡಿದ್ದರು ಎನ್ನಲಾಗಿದೆ.
ಜತೆಗೆ ತನ್ನ ಮೈದುನನಿಗೆ ಸರಿಯಾದ ಹೆಂಡತಿಯಲ್ಲ ಎಂದು ಹೀಗಳೆದಿದ್ದು ಮತ್ತು ದೇಹದ ಆಕೃತಿಯ ಬಗ್ಗೆ ಮಾತನಾಡಿದ್ದು, ಇದರಿಂದ ಮಾನಸಿಕ ಹಿಂಸೆಯಾಗಿದೆ ಎಂದು ಪ್ರಕರಣ ದಾಖಲಿಸಲಾಗಿತ್ತು. ಹೀಗಾಗಿ, ಅರ್ಜಿದಾರರು ಆಕೆಯ ಪತಿಯ ಹಿರಿಯ ಸಹೋದರನ ಮಡದಿಯಾಗಿದ್ದು, ಅವರ ಕುಟುಂಬದ ವ್ಯಾಪ್ತಿಗೆ ಬರುವುದಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
ಅರ್ಜಿದಾರರ ವಾದವನ್ನು ಅಲ್ಲಗಳೆದಿರುವ ನ್ಯಾಯಪೀಠ, ಪತಿಯ ಕುಟುಂಬದ ಯಾವುದೇ ಸದಸ್ಯ ಮಾಡುವ ದೇಹ ಸೌಂದರ್ಯದ ಕುರಿತು ಕುಹಕ ವಾಡುವುದು ಹಾಗೂ ಅನುಮಾನಿಸುವುದು ಕೂಡ ಕೌಟುಂಬಿಕ ಹಿಂಸೆಗೆ ಸಮಾನ ಎಂದು ಆದೇಶ ನೀಡಿ, ಅರ್ಜಿಯನ್ನು ವಜಾಗೊಳಿಸಿದೆ.


