ಗಗನಕ್ಕೇರಿದ ಬಿಳಿ ಬಣ್ಣದ ಚಿನ್ನ : 600 ರು.ಮುಟ್ಟಿದ ಬೆಳ್ಳುಳ್ಳಿ ಬೆಲೆ
ಬೆಂಗಳೂರು: ಪ್ರತಿ ಅಡುಗೆ ಮನೆಯ ಅನಿವಾರ್ಯದ ವಸ್ತು ಬೆಳ್ಳುಳ್ಳಿಯ ಬೆಲೆ ಗಗನಕ್ಕೇರಿದ್ದು, ಪ್ರತಿ ಕೆ.ಜಿಗೆ. 600 ರು ಗೆ ಮುಟ್ಟಿದೆ.
ಉತ್ತರ ಭಾರತದಲ್ಲಿ ಹೆಚ್ಚಾದ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಬೆಳೆ ನಾಶವಾಗಿದ್ದು, ಇದರ ಪರಿಣಾಮ ಬೆಳ್ಳುಳ್ಳಿಯ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಮಧ್ಯಪ್ರದೇಶ ಅತಿ ಹೆಚ್ಚು ಬೆಳ್ಳುಳ್ಳಿ ಬೆಳೆಯುವ ರಾಜ್ಯವಾಗಿದ್ದು, ರಾಜಸ್ಥಾನ ಎರಡನೇ ಅತಿ ಹೆಚ್ಚು ಬೆಳ್ಳುಳ್ಳಿ ಉತ್ಪಾದನಾ ರಾಜ್ಯವಾಗಿದೆ.
ಈ ಎರಡು ರಾಜ್ಯಗಳಲ್ಲಿ ಅದರಲ್ಲೂ ರಾಜಸ್ಥಾನದ ಅತಿ ಹೆಚ್ಚು ಬೆಳ್ಳುಳ್ಳಿ ಬೆಳೆಯುವ ಪ್ರದೇಶಗಳಾದ ಕೋಟಾ ಬರಾನ್, ಜೋಧ್ ಪುರ ಮತ್ತು ಬಂಡಿ ಪ್ರದೇಶದಲ್ಲಿ ಈ ಸಾಲಿನಲ್ಲಿ ಅತಿ ಹೆಚ್ಚು ಅಕಾಲಿಕ ಮಳೆಯಾಗಿದೆ. ಇದರ ಪರಿಣಾಮವಾಗಿ ಬೆಳ್ಳುಳ್ಳಿ ಉತ್ಪಾದನೆಯಲ್ಲಿ ಗಣನೀಯ ಇಳಿಕೆಯಾಗಿದೆ. ಹೀಗಾಗಿ, ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಗಗನ ಮುಟ್ಟಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಬೆಳ್ಳುಳ್ಳಿ ಬೆಲೆ 120 ರಿಂದ 160 ರು. ಆಗಿತ್ತು. ಇದು ಆಕ್ಟೋಬರ್ ತಿಂಗಳಲ್ಲಿ 160 ರಿಂದ 240 ಕ್ಕೆ ಮುಟ್ಟಿತು. ಇದೀಗ ನವೆಂಬರ್ ತಿಂಗಳಲ್ಲಿ ಬೆಳ್ಳುಳ್ಳಿ ಬೆಲೆ 400 ರಿಂದ 600 ರು.ಗಳ ಆಸುಪಾಸಿನಲ್ಲಿದೆ.


