ಬೆಂಗಳೂರು: ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ ತಿರುಚಿ ಮತ್ತೊಮ್ಮೆ ಪ್ರಶ್ನೆ ಮಾಡಿದ ಬಿಜೆಪಿಗೆ ಕಾಂಗ್ರೆಸ್ ಟ್ವೀಯಮೂಲಕವೇ ಚಳಿ ಬಿಡಿಸಿದೆ.
ನಮ್ಮ ಅವಧಿಯಲ್ಲಿ ಬಿಟ್ಟು ಹೋಗಿದ್ದ ₹5900 ಕೋಟಿ ನಷ್ಟದಿಂದ ಹೊಣೆಗಾರಿಕೆ ಬಾಕಿಗಳಾದ ಡೀಸೆಲ್ ಹಣ, ಸಿಬ್ಬಂದಿಯ ಭವಿಷ್ಯ ನಿಧಿ, ಖರೀದಿ ಸಾಮಾಗ್ರಿಗಳ ಹಣ ಸೇರಿ ಎಲ್ಲಾ ಬಾಕಿಗಳನ್ನು ತೀರಿಸುವ ಹೊಣೆಗಾರಿಕೆ ಹೊತ್ತು ನಾವು ಸಾರಿಗೆ ಸಂಸ್ಥೆಗಳನ್ನು ಮುನ್ನಡೆಸಬೇಕಾಗಿದೆ ಎಂದು ಕುಟುಕಿದೆ.
2018ರಲ್ಲಿ ನಮ್ಮ ಸರ್ಕಾರದ ಕೊನೆಯಲ್ಲಿ ಸಾರಿಗೆ ನಿಗಮಗಳಲ್ಲಿ ಭವಿಷ್ಯ ನಿಧಿ ಮೊತ್ತ ಬಾಕಿ ಇದ್ದದ್ದು ಕೇವಲ ₹ 13.71 ಕೋಟಿ. ಆದರೆ 2023ರ ಮೇ ಅಂತ್ಯಕ್ಕೆ ನಿಮ್ಮ ಸರ್ಕಾರ ಸಾರಿಗೆ ನಿಗಮಗಳಲ್ಲಿ ಬಾಕಿ ಇಟ್ಟು ಹೋದ ಭವಿಷ್ಯ ನಿಧಿ ಮೊತ್ತ ₹1380.59 ಕೋಟಿ! ಇದರಲ್ಲಿ ಯಾರ ಸಾಧನೆ ಹೆಚ್ಚು ಎಂದು ಪ್ರಶ್ನಿಸಿದೆ.
ಸಾರಿಗೆ ಸಿಬ್ಬಂದಿಗೆ 2020 ಜನವರಿಯಲ್ಲಿ ಮಾಡಬೇಕಿದ್ದ ಸಂಬಳ ಏರಿಕೆಯನ್ನು 38 ತಿಂಗಳು ತಡವಾಗಿ 2023 ಮಾರ್ಚ್ನಲ್ಲಿ ಏರಿಕೆ ಮಾಡಿ, ಏರಿಕೆಯಾದ ಸಂಬಳದ 38 ತಿಂಗಳ ಅರಿಯರ್ಸ್ ಸಿಬ್ಬಂದಿಗಳಿಗೆ ನೀಡದೆ, ಅದಕ್ಕೆ ಬೇಕಾದ ಅನುದಾನವನ್ನೂ ಕೊಡದೆ ಸಾರಿಗೆ ಸಿಬ್ಬಂದಿಗೆ ಮೋಸ ಮಾಡಿ ಹೋಗಿರುವ ನಿಮಗೆ ಈ ಬಗ್ಗೆ ಮಾತನಾಡುವ ಯಾವ ನೈತಿಕತೆಯಿದೆ? ಎಂದು ಪ್ರಶ್ನಿಸಿದೆ.
ಶಕ್ತಿ’ ಯಂತಹಾ ಯಶಸ್ವಿ ಯೋಜನೆಯ ಜೊತೆಗೇ, ನೀವು ಬಿಟ್ಟುಹೋದ ಸಾಲವನ್ನೂ ತೀರಿಸುತ್ತಾ ಸಾರಿಗೆ ಸಂಸ್ಥೆಗಳನ್ನು ದೇಶದಲ್ಲಿಯೇ ಅತ್ಯುತ್ತಮ ಎಂಬ ಹೆಗ್ಗಳಿಕೆಯೊಂದಿಗೆ ಮುನ್ನಡೆಸುತ್ತಿದ್ದೇವೆ. ನಿಮ್ಮಂತೆ ಯಾವುದೇ ಬಾಕಿ ಉಳಿಸಿ ಸಿಬ್ಬಂದಿಗೆ ಮೋಸ ಮಾಡುವುದಿಲ್ಲ, ಸಾರಿಗೆ ಸಿಬ್ಬಂದಿ ಹಿತ ಕಾಯುವುದು ನಮಗೆ ಗೊತ್ತು ಮತ್ತು ಅದು ನಮ್ಮ ಬದ್ಧತೆ ಎಂದು ಟಾಂಗ್ ನೀಡಿದೆ.
