ಮದನ್ ಪಟೇಲ್ ಅನುಭವದಿಂದ ಅನಾವರಣಗೊಂಡ ಚಿತ್ರ
ನಾಳೆ ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ ತಮಟೆ
ಬೆಂಗಳೂರು: ನೆಲಮೂಲದ ಜನರ ನೋವುಗಳು ಯಾವಾಗಲೂ ಸುಂದರ ಕಥಾನಕವಾಗಿ ರೂಪ ತಾಳುತ್ತವೆ. ಅಂತಹದ್ದೇ ಒಂದು ರೂಪಕ ತಮಟೆ ಚಿತ್ರ.
ನಟ ಮಯೂರ್ ಪಟೇಲ್ ನಿರ್ದೆಶನದ, ಹಿರಿಯ ನಟ ಮದನ್ ಪಟೇಲ್ ನಿರ್ಮಾಣ ಮಾಡಿ, ಸಂಗೀತ ನೀಡಿ ನಟನೆ ಮಾಡಿರುವ ತಮಟೆ ಚಿತ್ರ ಕನ್ನಡದ ಪಾಲಿಗಂತೂ ಅಪರೂಪದ ಕಥಾವಸ್ತು. ಕನ್ನಡದಲ್ಲಿ ನೆಲಮೂಲದ ಜನರ ಬವಣೆಗಳು ಸಿನಿಮಾವಾಗುವುದೇ ಕಡಿಮೆ. ಅಂತಹದ್ದರಲ್ಲಿ ತಮಟೆ ಕಲಾವಿದನೊಬ್ಬನ ಕರುಳು ಮುರಿಯುವ ಕತೆಯನ್ನು ನವೀನ್ ಮಯೂರ್ ಅಚ್ಚುಕಟ್ಟಾಗಿ ಹೇಳಿದ್ದಾರೆ.
ಊರ ದೇವಿಯ ಮುಂದೆ ತಮಟೆ ಬಡಿಯುವ ಸಮುದಾಯಗಳ ನೋವು ಇಂದಿಗೂ ಪ್ರಸ್ತುತವಾದುದು. ಇಂತಹ ಸಮುದಾಯದ ವ್ಯಕ್ತಿಯೊಬ್ಬನ ಪಾತ್ರದಲ್ಲಿ ಮದನ್ ಪಟೇಲ್ ಅದ್ಭುತವಾಗಿ ನಟಿಸಿದ್ದಾರೆ. ಆತನಿಗೆ ಸಮಾಜ ಕೊಡುವ ಕಿರುಕುಳ, ಹಿಂಸೆಯನ್ನು ಹಸಿಹಸಿಯಾಗಿ ಚಿತ್ರಿಸಲಾಗಿದೆ.
ಚಿತ್ರದಲ್ಲಿ ತಮಟೆ ಕಲಾವಿದರು ಮತ್ತು ಅವರ ಸಮುದಾಯದ ಸಂಪ್ರದಾಯ, ಬದ್ಧತೆ, ಭಕ್ತಿ, ಭಯ, ಬವಣೆಗಳನ್ನು ಸುಂದರವಾಗಿ ಪೋಣಿಸಿ ಎಣೆಯಲಾಗಿದೆ. ಅವರ ಮೇಲೆ ಮೇಲ್ವರ್ಗ ತೋರುವ ದರ್ಪ, ದಬ್ಬಾಳಿಕೆ ಚಿತ್ರದಲ್ಲಿ ಅನಾವರಣಗೊಂಡಿದೆ.
ಇನ್ನು ಕಥಾನಾಯಕನ ಮಗ ವಿದ್ಯಾವಂತ, ಆತನನ್ನು ಊರಿನ ಮೇಲ್ವರ್ಗದ ಸಾಹುಕಾರನ ಮಗಳು ಪ್ರೀತಿಸುತ್ತಾಳೆ. ಆತನಿಗಾಗಿ ಜೀವ ಕೊಡುವ ಭರವಸೆಯೊಂದಿಗೆ ಓಡಿಹೋಗಿ ಮದುವೆಯಾಗುತ್ತಾರೆ. ಇದನ್ನು ಸಹಿಸದ ಸಮಾಜ, ಇಡೀ ಸಮುದಾಯವನ್ನು ಬಹಿಷ್ಕಾರ ಹಾಕುತ್ತದೆ.
ಆದರೆ, ವರ್ಷಗಳ ನಂತರ ಆ ಸುಂದರ ಜೋಡಿ, ತಮ್ಮ ಪುಟ್ಟ ಮಗುವಿನ ಜತೆಗೆ ಊರಿಗೆ ವಾಪಸ್ಸಾಗುತ್ತದೆ. ಆ ವೇಳೆ ಕಥಾನಾಯಕ ಸೇರಿ, ಇಡೀ ಸಮುದಾಯ ಕುಣಿದು ಕುಪ್ಪಳಿಸಿ ಬಾಡೂಟದ ತಯಾರಿ ನಡೆಸುತ್ತಿರುತ್ತದೆ. ಆದರೆ, ಊರಿನ ಗಡಿ ದಾಟುವ ಮೊದಲೇ ಗುಡಿಯ ಮುಂದೆ ಆ ಗಂಡಹೆಂಡಿರ ಹೆಣ ಬೀಳಿಸುತ್ತಾರೆ ಮೇಲ್ವರ್ಗದ ಪುಢಾರಿಗಳು.

ಮಗ ಮತ್ತು ಸೊಸೆಯ ಸಾವು, ಹೆಣದ ಮುಂದೆ ಕುಳಿತು ರೋಧಿಸುವ ಹಸುಳೆಯ ಆರ್ತನಾದಗಳನ್ನೆಲ್ಲ ಕಂಡ ಕಥಾನಾಯಕ ಕುದ್ದು ಹೋಗುತ್ತಾನೆ. ದೇವಿಯ ಮುಂದೆ ನಿಂತು ತನ್ನ ತಮಟೆಯ ಸದ್ದಿನಿಂದಲೇ ಆಕೆಯನ್ನು ಎಚ್ಚರಗೊಳಿಸುವ ಪ್ರಯತ್ನ ಮಾಡುತ್ತಾನೆ. ಅಷ್ಟರಲ್ಲಾಗಲೇ ಆತನ ಕೈಗೆ ರಕ್ತ ಮೆತ್ತಿರುತ್ತದೆ.
ಇಡೀ ಊರಿಗೆ ಊರೇ ಮುನಿಯನ ತಮಟೆ ಸದ್ದು ಕೇಳಿ ದೇವಿಯ ಜಾತ್ರೆ ಮಾಡಲು ಮುಂದಾಗುತ್ತಾರೆ. ಆದರೆ, ಮುನಿಯನ ಕೈಯ್ಯೊಳಗಿನ ತಮಟೆ ಹೊಡೆದು ಹೋಗುತ್ತದೆ. ಇಡೀ ಊರ ಜನ ಆತನ ಕೈಗಂಟಿದ ರಕ್ತ ಕೋಣನ ಬಲಿ ರಕ್ತ ಎಂದು ಕೊಳ್ಳುತ್ತಾರೆ. ಆದರೆ, ಅದು ಕೋಣನ ರಕ್ತವೋ, ಮುನಿಯನೊಳಗಿನ ಸೇಡು ತಣಿಸಿದ ಪನ್ನೀರೋ ಎಂಬುದು ಕತೆಯ ಕುತೂಹಲ.

ಇಂತಹ ಕೌತುಕವನ್ನು ಕತೆಯೊಳಗೆ ಉಳಿಸಿಕೊಳ್ಳುವಲ್ಲಿ ಮಯೂರ್ ಪಟೇಲ್ ಯಶಸ್ವಿಯಾಗಿದ್ದಾರೆ. ಮದನ್ ಪಟೇಲ್ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಟೆನ್ನಿಸ್ ಕೃಷ್ಣ, ಚಂದನ್ ಗೌಡ ಸೇರಿ ಅನೇಕ ಹಿರಿಯ ಕಲಾವಿದರ ತಂಡವೇ ಚಿತ್ರದಲ್ಲಿದೆ. ಮದನ್ ಪಟೇಲ್ ಚಿತ್ರಕ್ಕೆ ಸಂಗೀತ ನೀಡಿದ್ದು, ನೆಲಮೂಲದ ಕವಿ ಡಾ. ಸಿದ್ದಲಿಂಗಯ್ಯ ರಚನೆಯ ‘ಉತ್ತರ ದಿಕ್ಕಿನ ರಾಜಕುಮಾರಿ’ ಗೀತೆಯೂ ಸೇರಿದಂತೆ ಹಾಡುಗಳು ಅದ್ಭುತವಾಗಿವೆ.

