ಚಿಕ್ಕ ವಯಸ್ಸಿನವರಿಗೆ ಮನೆ ಬಾಡಿಗೆಗೆ ಕೊಡಲ್ಲ : ಬೆಂಗಳೂರಿನ ಮನೆ ಮಾಲೀಕರ ನಡೆಗೆ ಪವರ್ ಪ್ರೆಸೆಂಟೇಷನ್
ಬೆಂಗಳೂರು: ರಾಜಧಾನಿಯ ಬಾಡಿಗೆದಾರ, ಮನೆ ಮಾಲೀಕರ ಮನಸ್ಥಿತಿ ಆಗಾಗ ಸುದ್ದಿಯಾಗುತ್ತಲೇ ಇದ್ದು, ಇದೀಗ ಚಿಕ್ಕ ವಯಸ್ಸಿನ ಕಾರಣಕ್ಕೆ ಯುವತಿಗೆ ಮನೆ ಕೊಡದಿರುವುದು ಚರ್ಚೆಗೆ ಗ್ರಾಸವಾಗಿದೆ.
ದೊಮ್ಮಲೂರಿನಲ್ಲಿ ನೈನಾ ಎಂಬ ಸಾಫ್ಟ್‌ವೇರ್ ಉದ್ಯೋಗಿ ಅಪಾರ್ಟ್ಮೆಂಟ್ ಬಾಡಿಗೆಗೆ ಕೇಳಿದ್ದರು. ಆದರೆ, ಆಕೆ ಇನ್ನೂ ಚಿಕ್ಕ ವಯಸ್ಸಿನವಳು. ಹೀಗಾಗಿ, ನೆರೆಹೊರೆಯವರೊಂದಿಗೆ ಹೊಂದಾಣಿಕೆ ಕಷ್ಟ ಎಂಬ ಕಾರಣ ನೀಡಿ, ಮನೆ ನೀಡಲು ಮಾಲೀಕರು ನಿರಾಕರಿಸಿದ್ದರು.
ಈ ವಿಷಯವನ್ನಿಟ್ಟುಕೊಂಡು ನೈನಾ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಕೊಟ್ಟಿದ್ದು, ತಾನು ಮನೆಯಲ್ಲಿ ಯಾವ ರೀತಿ ಇರುತ್ತೇನೆ. ಮನೆಯ ನೆರೆಹೊರೆಯವರ ಜತೆಗೆ ಹೇಗೆ ನಡೆದುಕೊಳ್ಳುತ್ತೇನೆ ಎಂಬುದನ್ನೆಲ್ಲ ವಿಸ್ತೃತ ರೀತಿಯಲ್ಲಿ ವಿವರಿಸಿದ್ದಾರೆ.
ಪಾಂಡಿಚೇರಿಯಲ್ಲಿದ್ದಾಗ ಆಕೆ ಆನ್ ಲೈನ್ ಮೂಲಕ ಮನೆ ಬುಕ್ ಮಾಡಿದ್ದಳು. ಆದರೆ, ಬೆಂಗಳೂರಿಗೆ ಬಂದಾಗ ಆಕೆಯ ವಯಸ್ಸು ಚಿಕ್ಕದ್ದು ಎಂಬ ಕಾರಣಕ್ಕೆ ಆಕೆಗೆ ಮನೆ ಕೊಡಲು ನಿರಾಕರಿಸಲಾಯಿತು. 20 ವರ್ಷದ ನೈನಾ ತಾನು ಧೂಮಪಾನ ಮಾಡುವುದಿಲ್ಲ, ಬೇಗನೆ ಎದ್ದು, ಮನೆಯನ್ನು ಸ್ವಚ್ಛವಾಗಿಟ್ಟು ಕೊಳ್ಳುತ್ತೇನೆ ಎಂಬುದನ್ನು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ವಿವರಿಸಿದ್ದಾರೆ.
ಇದೀಗ ನೈನಾ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಆಕೆಯ ಕುರಿತು ಅನೇಕರು ಅನುಕಂಪ ವ್ಯಕ್ತಪಡಿಸಿದ್ದಾರೆ. ಮತ್ತೇ ಕೆಲವರು, ಪದೇಪದೇ ಆಕೆ ಮನೆ ಬದಲಾಯಿಸುವ ವಿಡಿಯೋ ಮಾಡುವ ಕಾರಣಕ್ಕಡ ಆಕೆಯದ್ದೇ ಏನೋ ತಪ್ಪಿದೆ ಎಂದಿದ್ದಾರೆ. ಮತ್ತೇ ಕೆಲವರು, ಆಕೆ ಬ್ರೋಕರ್ ಇರಬಹುದು ಎಂದು ಸಂಶಯಪಟ್ಟಿದ್ದಾರೆ.


