ಮುಜರಾಯಿ ಇಲಾಖೆಯಿಂದ ತಲೆಯೆತ್ತಲಿದೆ ಹಿಂದೂ ‘ಧಾರ್ಮಿಕ ಸೌಧ’: ಹಿಂದೂ ವಿರೋಧಿ ಸರಕಾರ ಎಂದವರಿಗೆ ತಕ್ಕ ಉತ್ತರ
‘ಹಿಂದೂ ವಿರೋಧಿ’ ಎನಿಸಿಕೊಳ್ಳುವವರ ಹಿಂದೂ ಪರ ಕಾರ್ಯ
ಸಚಿವ ರಾಮಲಿಂಗಾ ರೆಡ್ಡಿ ಇಚ್ಛಾಶಕ್ತಿಯಿಂದ ಆಸ್ತಿಕರ ಕನಸು ಸಾಕಾರ
ಬೆಂಗಳೂರು: ಸ್ವಾತಂತ್ರ್ಯ ನಂತರ ಈವರೆಗೆ ಬಾಡಿಗೆ ಕಟ್ಟಡದಲ್ಲಿಯೇ ಇದ್ದ ಮುಜರಾಯಿ ಇಲಾಖೆಗೆ ಇದೀಗ ಸ್ವತಃ ಕಟ್ಟಡದ ಭಾಗ್ಯ ಒದಗಿಬರಲಿದೆ. ಸಚಿವ ರಾಮಲಿಂಗಾ ರೆಡ್ಡಿ ಅವರ ಇಚ್ಛಾಶಕ್ತಿಯಿಂದ ಧಾರ್ಮಿಕ ಸೌಧ ತಲೆ ಎತ್ತಲಿದೆ.
ಶಕ್ತಿ ಕೇಂದ್ರದ ಪಕ್ಕದಲ್ಲಿಯೇ ಇರುವ ಶ್ರೀ ರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಧಾರ್ಮಿಕ ಸೌಧ ತಲೆ ಎತ್ತಲಿದೆ. ಇದು ಕಾಂಗ್ರೆಸ್ ಗೆ ಹಿಂದೂ ವಿರೋಧಿ ಹಣೆಪಟ್ಟಿ ಕಟ್ಟುವ ಬಿಜೆಪಿ ನಾಯಕರಿಗೆ ಕೌಂಟರ್ ಕೊಡುವ ರೀತಿಯ ನಡೆಯಾಗಿದ್ದು, ಇದೇ ಮೊದಲ ಬಾರಿಗೆ ಇಂತಹ ಪ್ರಯತ್ನ ನಡೆಯುತ್ತಿದೆ.
ರಾಜ್ಯದಲ್ಲಿರುವ 25 ಲಕ್ಷಕ್ಕೂ ಅಧಿಕ ಆದಾಯ ಸಂಗ್ರಹವಿರುವ ದೇವಸ್ಥಾನದಿಂದ ಸಂಗ್ರಹವಾಗುವ ಶೇ. 5 ರಷ್ಟು ಅನುದಾನದ ಸಂಗ್ರಹ ಇಲಾಖೆಯಲ್ಲಿ ಸುಮಾರು 20 ಕೋಟಿ ಸಂಗ್ರಹವಾಗಿದೆ. ಈ ಸಾಮಾನ್ಯ ಸಂಗ್ರಹ ನಿಧಿ ಬಳಸಿಕೊಂಡು ಕಟ್ಟಡ ನಿರ್ಮಾಣ ಮಾಡಲಾಗುತ್ತದೆ.
PWD ಇಲಾಖೆ ಕಟ್ಟಡ ನಿರ್ಮಾಣದ ಜವಾಬ್ದಾರಿ ವಹಿಸಿಕೊಳ್ಳಲಿದೆ. ಟೆಂಡರ್ ಪ್ರಕ್ರಿಯೆಯಿಲ್ಲದೆ ನೇರವಾಗಿ ಕಾಮಗಾರಿ ನಡೆಸುತ್ತದೆ. ಯಾವುದೇ ಟೆಂಡರ್ ಕರೆಯುವುದಿಲ್ಲ, ಕಟ್ಟಡ ನಿರ್ಮಾಣಕ್ಕೆ ನೇರವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ. ಒಂದು ವರ್ಷದಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಕಟ್ಟಡದ ವಿಶೇಷವೇನು?
26 ಗುಂಟೆ ಜಾಗದಲ್ಲಿ 6 ಗುಂಟೆ ಜಾಗವನ್ನು ದೇವಸ್ಥಾನದ ವ್ಯಾಪ್ತಿಗೆ ಮೀಸಲಿರಿಸಿ, ಉಳಿದ 20 ಗುಂಟೆ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ಗ್ರೌಂಡ್ ಪ್ಲೋರ್ ಸೇರಿ ನಾಲ್ಕು ಅಂತಸ್ತುಗಳ ಕಟ್ಟಡ, ಮೀಟಿಂಗ್ ಹಾಲ್, ಸಭಾಭವನ ನಿರ್ಮಾಣ, ಆಯುಕ್ತರ ಕಾರ್ಯಾಲಯ, ನೆಲಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ನಿರ್ಮಾಣ ಮಾಡಲಾಗುತ್ತದೆ.


