ಅಂತರ-ಅಪಾರ್ಟ್ಮೆಂಟ್ ಕ್ರೀಡಾಕೂಟ: ಯುವಕರು-ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರ ತರಲು ಕ್ರೀಡೆಯೊಂದೆ ಸ್ಫೂರ್ತಿ: ಕೃಷ್ಣ ಬೈರೇಗೌಡ
• ಬ್ಯಾಟರಾಯನಪುರದ ಮೂರು ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಹಬ್ಬ
• ಕ್ರಿಕೆಟ್ ಸೇರಿ 8 ಕ್ರೀಡೆಗಳಲ್ಲಿ 3000 ಕ್ಕೂ ಅಧಿಕ ಕ್ರೀಡಾಪಟುಗಳು ಭಾಗಿ
• ವಿಜೇತ ತಂಡ-ಸ್ಫರ್ಧಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದ ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು,:
ನಮ್ಮ ಇಂದಿನ ಯುವ ಸಮಾಜವನ್ನು ಮೊಬೈಲ್ ಗೀಳಿನಿಂದ ಹೊರ ತರಲು ಕ್ರೀಡಾ ಉತ್ಸವಗಳ ಆಯೋಜನೆಯೊಂದೇ ದಾರಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟರು.
ಸಚಿವ ಕೃಷ್ಣ ಬೈರೇಗೌಡ ಅವರು ಆಯೋಜಿಸಿದ್ದ ಎರಡನೇ ವರ್ಷದ ಅಂತರ-ಅಪಾರ್ಟ್ಮೆಂಟ್ ಕ್ರೀಡಾಕೂಟ ಕಳೆದ ಎರಡು ದಿನಗಳಿಂದ ಬ್ಯಾಟರಾಯನಪುರ ಕ್ಷೇತ್ರದ ವಿವಿಧ ಮೂರು ಒಳಾಂಗಣ ಕ್ರೀಡಾಂಗಣಗಳಲ್ಲಿ ಜರುಗಿತು. ಭಾನುವಾರ ನೂತನವಾಗಿ ಉದ್ಘಾಟಿಸಲಾಗಿರುವ ಕೆಂಪಾಪುರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡಿ ಅವರು ಮಾತನಾಡಿದರು.
“ಆರೋಗ್ಯ ವಂತ ಯುವ ಸಮಾಜವನ್ನು ನಿರ್ಮಿಸಲು ಕ್ರೀಡೆಯೊಂದೇ ದಾರಿ. ಆದರೆ, ಇಂದಿನ ಮಕ್ಕಳು ಎಲ್ಲಾ ಕ್ರೀಡೆಗಳನ್ನೂ ಮೊಬೈಲ್ ನಲ್ಲೇ ಆಡುತ್ತಾ ಕಾಲ ಕಳೆಯುತ್ತಿದ್ದಾರೆ. ಪರಿಣಾಮ ದೈಹಿಕ ಆರೋಗ್ಯದಿಂದಲೂ ಮಕ್ಕಳು ವಂಚಿತರಾಗಿದ್ದಾರೆ. ಇಂತಹ ಗೀಳಿನಿಂದ ನಮ್ಮ ಇಂದಿನ ಪೀಳಿಗೆಯನ್ನು ಹೊಸ ತರಲು ಕ್ರೀಡೆಯೊಂದೇ ದಾರಿ ಮತ್ತು ಸ್ಫೂರ್ತಿ. ನಮ್ಮ ಯುವಕರನ್ನು ಆರೋಗ್ಯವಂತ ಸಮಾಜದ ಭಾಗವನ್ನಾಗಿಸುವ ಉದ್ದೇಶದಿಂದಲೇ ಅಂತರ್ ಅಪಾರ್ಟ್ಮೆಂಟ್ ಕ್ರೀಡಾ ಹಬ್ಬವನ್ನು ಆಯೋಜಿಸಲಾಗಿದ್ದು ಸಾರ್ಥಕ ಕೆಲಸ” ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಮುಂದುವರೆದು, “ಅಪಾರ್ಟ್ಮೆಂಟ್ ನಿವಾಸಿಗಳು ಬಹುತೇಕ ಐಟಿ-ಬಿಟಿ ಉದ್ಯಮದ ಭಾಗವಾಗಿದ್ದಾರೆ. ಈ ಪೈಕಿ ಬಹುತೇಕರು ಹೊರಗಿನ ಪ್ರಪಂಚದಲ್ಲಿ ನಡೆಯುತ್ತಿರುವುದರ ಬಗ್ಗೆ ಪರಿವೆಯೇ ಇಲ್ಲದೆ ತಮ್ಮ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಸಾಮಾಜಿಕ-ಸಾಮೂಹಿಕ ಚಟುವಟಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಿಲ್ಲ. ಅಂತವರನ್ನು ಅಪಾರ್ಟ್ಮೆಂಟ್ಗಳಿಂದ ಹೊರತಂದು ಸಮಾಜದಲ್ಲಿ ಎಲ್ಲರೊಂದಿಗೆ ಬೆರೆಯುವಂತೆ ಮಾಡಲು ಹಾಗೂ ಒಗ್ಗಟ್ಟಿನ – ಸಾಮರಸ್ಯದ ಸಮಾಜ ನಿರ್ಮಿಸಲೂ ಸಹ ಈ ಕ್ರೀಡಾಹಬ್ಬ ಸಹಕಾರಿಯಾಗಿದೆ. ಇಂತಹ ಕ್ರೀಡಾ ಹಬ್ಬಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿ” ಎಂದು ಆಶಿಸಿದರು.
“ಕಳೆದ ಎರಡು ದಿನಗಳಿಂದ ಕ್ರಿಕೆಟ್, ಸ್ವಿಮಿಂಗ್, ಬ್ಯಾಡ್ಮಿಂಟನ್, ಕ್ಯಾರಂಬೋರ್ಡ್, ಟೇಬಲ್ ಟೆನಿಸ್ ಸೇರಿದಂತೆ ವಿವಿಧ 8 ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಹತ್ತಾರು ಅಪಾರ್ಟ್ಮೆಂಟ್ಗಳ ಮಹಿಳೆಯರು ಪುರುಷರೂ ಸೇರಿ ಕನಿಷ್ಠ 3000 ಕ್ರೀಡಾಪಟುಗಳು ಈ ಕ್ರೀಡಾಹಬ್ಬದಲ್ಲಿ ಭಾಗವಹಿಸಿದ್ದಾರೆ. ಹಲವರು ವಿಜಯಶಾಲಿಯಾಗಿದ್ದಾರೆ. ಕ್ರೀಡೆಯಲ್ಲಿ ಪಾಲ್ಗೊಂಡು ಗೆಲುವು ಸಾಧಿಸಿದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸುವುದು ನಿಜಕ್ಕೂ ಸಂತೋಷದ ನೀಡಿದೆ” ಎಂದರು.
ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದ ಅವರು, “ಈ ಎರಡು ದಿನದ ನಿಮ್ಮ ದೈಹಿಕ ಶ್ರಮವನ್ನು ಇಲ್ಲಿಗೆ ನಿಲ್ಲಿಸಬೇಡಿ. ಪ್ರತಿ ದಿನ ನಿಮ್ಮನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ. ಕ್ರೀಡಾಪಟುಗಳಿಗೆ ಸಹಕಾರಿಯಾಗಲಿ ಎಂಬ ಕಾರಣದಿಂದಾಗಿಯೇ ಬ್ಯಾಟರಾಯನಪುರ ಕ್ಷೇತ್ರದ ಮೂರು ಭಾಗಗಳಲ್ಲಿ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಮೂರು ಒಳಾಂಗಣ ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದೆ. ಎಲ್ಲರ ಕೈಗೆಟುಕುವ ಖರ್ಚಿನಲ್ಲಿ ಯೋಗ, ಜುಂಬಾ, ಜಿಮ್, ಸಿಥೆಟಿಕ್ ಬ್ಯಾಡ್ಮಿಂಟನ್ ಕೋರ್ಟ್, ಸ್ವಿಮಿಂಗ್, ಟೇಬಲ್ ಟೆನಿಸ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅವಕಾಶ ನೀಡಲಾಗಿದೆ.
ಅಲ್ಲದೆ, ಬಾಗಲೂರಿನಲ್ಲೂ ನಾಲ್ಕು ಕೋಟಿ ವೆಚ್ಚದಲ್ಲಿ ಮತ್ತೊಂದು ಕ್ರೀಡಾಂಗಣ ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ಕ್ರೀಡಾಂಗಣದಲ್ಲಿ ಮತ್ತಷ್ಟು ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಲಾಗುವುದು. ಹೀಗಾಗಿ ಯುವಜನರು ದಯವಿಟ್ಟು ಈ ಎಲ್ಲಾ ಸೌಲಭ್ಯಗಳನ್ನೂ ಬಳಸಿಕೊಳ್ಳಬೇಕು. ಕ್ರೀಡೆಗಳ ಮೂಲಕ ತಮ್ಮ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕು” ಎಂದು ಸಚಿವ ಕಷ್ಣ ಬೈರೇಗೌಡ ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಹಿಳೆಯರು –ಪುರುಷರು ಸೇರಿ ಸುಮಾರು 100ಕ್ಕೂ ಅಧಿಕ ಕ್ರೀಡಾಪಟುಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು


