ತಿರುಪತಿಗೆ ಬರುವ ಕರ್ನಾಟಕದ ಭಕ್ತರಿಗೆ ಗುಡ್ ನ್ಯೂಸ್ ಕೊಟ್ಟ ಮುಜರಾಯಿ ಇಲಾಖೆ
ವರ್ಷಗಟ್ಟಲೇ ನೆನೆಗುದಿಗೆ ಬಿದ್ದಿದ್ದ ಕರ್ನಾಟಕ ಭವನ ಕಾಮಗಾರಿಗೆ ಶರವೇಗ
ಕರ್ನಾಟಕ ಭವನದ 113 ರೂಂಗಳ ಮತ್ತೊಂದು ಬ್ಲಾಕ್ ಸಂಕ್ರಾಂತಿಗೆ ಉದ್ಘಾಟನೆ
ಬೆಂಗಳೂರು: ತಿರುಪತಿಗೆ ತೆರಳುವ ಕರ್ನಾಟಕದ ಭಕ್ತರಿಗೆ ಆಗುವ ಅನಾನುಕೂಲಗಳನ್ನು ತಪ್ಪಿಸಲು ಮುಜರಾಯಿ ಇಲಾಖೆ ಮುಂದಾಗಿದ್ದು, ಅತ್ಯಾಧುನಿಕ ಕರ್ನಾಟಕ ಭವನ ಸಜ್ಜುಗೊಳಿಸುತ್ತಿದೆ. ಇದರ ಮತ್ತೊಂದು ಬ್ಲಾಕ್ ಸಂಕ್ರಾಂತಿಗೆ ಭಕ್ತಾದಿಗಳ ಉಪಯೋಗಕ್ಕೆ ಲಭ್ಯವಾಗಲಿದೆ.
ಕರ್ನಾಟಕ ಭವನ ಒಂದು ಕಾಲಕ್ಕೆ ಇದ್ದೂ ಇಲ್ಲದಂತಿತ್ತು. ರಾಜ್ಯದಿಂದ ಹೋದ ಭಕ್ತಾಧಿಗಳು ಅದರ ಸೌಲಭ್ಯ ಪಡೆಯಲು ಮುಜುಗರಪಡುತ್ತಿದ್ದರು. ಆದರೆ, ರಾಮಲಿಂಗಾ ರೆಡ್ಡಿ ಅವರು, ಮುಜರಾಯಿ ಸಚಿವರಾದ ನಂತರ ಕರ್ನಾಟಕ ಭವನದ ಕಾಮಗಾರಿಗೆ ವೇಗ ಸಿಕ್ಕಿದೆ. ಹೀಗಾಗಿ, ಇದೀಗ ಎರಡನೇ ವಿಭಾಗದ ಉದ್ಘಾಟನೆ ಶೀಘ್ರದಲ್ಲೇ ನಡೆಯಲಿದೆ.
ಕರ್ನಾಟಕದಿಂದ ತಿರುಪತಿಗೆ ತೆರಳುವ ಭಕ್ತಾಧಿಗಳು ಅನುಭವಿಸುವ ಸಂಕಷ್ಟಕ್ಕೆ ಬ್ರೇಕ್ ಹಾಕಲು ರಾಜ್ಯ ಸರಕಾರ ಮುಂದಾಗಿದೆ. ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರ ಮುತುವರ್ಜಿಯಿಂದ ಕರ್ನಾಟಕ ಭವನ ಭವ್ಯ ರೂಪದಲ್ಲಿ ಹರಳುತ್ತಿದೆ.
ಹಿಂದೆ ತಿರುಪತಿಯಲ್ಲಿ ಕರ್ನಾಟಕದ ಭಕ್ತರಿಗೆ ಸಿಗುತ್ತಿದ್ದದ್ದು, ಕೇವಲ 80 ರೂಮ್ ಗಳು ಮಾತ್ರ. ಆದ್ರೆ, ಈಗ ಅದರ ಸಂಖ್ಯೆ 313 ಕ್ಕೆ ಏರಿಕೆಯಾಗಿದೆ. ಈ ಹಿಂದೆ ಆಳುವವರ ನಿರ್ಲಕ್ಷ್ಯದಿಂದ ನೆನೆಗುದಿಗೆ ಬಿದಿದ್ದ ಕರ್ನಾಟಕ ಭವನದ ಹೊಸ ಬ್ಲಾಕ್ ಗಳ ಕಾಮಗಾರಿಗೆ ಇದೀಗ ವೇಗ ಸಿಕ್ಕಿದೆ. ರಾಮಲಿಂಗಾ ರೆಡ್ಡಿ ಅವರು ಸಚಿವರಾದ ಮೇಲೆ ಈ ಕಾಮಗಾರಿ ವೇಗ ಪಡೆದಿದೆ.
ಹಳೆಯ 80 ರೂಮ್ ಗಳನ್ನು ಈಗಾಗಲೇ ನವೀಕರಣ ಮಾಡಲಾಗಿದೆ. ಜತೆಗೆ, ಈಗಾಗಲೇ 100 ಹೊಸ ರೂಮ್ ಗಳ ಒಂದು ಬ್ಲಾಕ್ ಭಕ್ತರಿಗೆ ಲಭ್ಯವಾಗುತ್ತಿದೆ. ಇದೀಗ ಎರಡನೇ ಹಂತದಲ್ಲಿ 113 ರೂಮ್ ಗಳು ಬಳಕೆಗೆ ಸಿದ್ಧವಾಗಿದ್ದು, ಅವುಗಳ ಉದ್ಘಾಟನೆ ಸಂಕ್ರಾಂತಿ ಹಬ್ಬಕ್ಕೆ ಉದ್ಘಾಟನೆ ನಡೆಯಲಿದೆ.
ಈಗಾಗಲೇ ಅಧಿಕಾರಿಗಳ ಜತೆಗೆ ಸಚಿವ ರಾಮಲಿಂಗಾ ರೆಡ್ಡಿ ಮಾತುಕತೆ ನಡೆಸಿದ್ದು, ಪೂರ್ಣಗೊಂಡ ಕಾಮಗಾರಿ ವೀಕ್ಷಣೆ ಮಾಡಿ ವರದಿ ನೀಡಲು ಸಮಿತಿಗೆ ತಿಳಿಸಿದ್ದಾರೆ. ತಿರುಪರತಿಗೆ ತೆರಳುವ ಭಕ್ತರಿಗೆ ಐಷಾರಾಮಿ ಐಟೆಕ್ ವ್ಯವಸ್ಥೆ ಕಲ್ಪಿಸಲು ಕರ್ನಾಟಕ ಭವನ ಸಜ್ಜಾಗಲಿದೆ.
ಜನವರಿ 15 ರ ನಂತರ 114 ರೂಮ್ ಗಳು ಹೆಚ್ಚುವರಿಯಾಗಿ ಕರ್ನಾಟಕದ ಭಕ್ತರಿಗೆ ಲಭ್ಯವಾಗಲಿವೆ. ಆನ್ ಲೈನ್ ಮೂಲಕ ಬುಕಿಂಗ್ ಮಾಡಿಕೊಳ್ಳಬಹುದು. ಇನ್ನೂ ಸಮುದಾಯ ಭವನ ಹಾಗೂ ಇನ್ನುಳಿದ ರೂಮ್ ಗಳ ಕಾಮಗಾರಿ ಏಪ್ರಿಲ್ ಅಂತ್ಯಕ್ಕೆ ಪೂರ್ಣವಾಗಲಿದೆ.
ಎರಡು ರಾಜ್ಯದ ಸಿಎಂಗಳು ಭಾಗಿ: ಏಪ್ರಿಲ್‌ನಲ್ಲಿ ಕರ್ನಾಟಕ ಭವನದ ಹೊಸ ಕಟ್ಟಡದ ಉದ್ಘಾಟನೆ ನಡೆಯಲಿದ್ದು, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಡಿಸಿಎಂ ಪವನ್ ಕಲ್ಯಾಣ್, ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಅದ್ದೂರಿ ಕಾರ್ಯಕ್ರಮ ಆಯೋಜನೆಗೆ ಮುಜರಾಯಿ ಇಲಾಖೆ ತೀರ್ಮಾನಿಸಿದೆ.


