ಸಿರಿಗನ್ನಡ ಮಿತ್ರತಂಡದಿಂದ ಅದ್ದೂರಿಯ ರಾಜ್ಯೋತ್ಸವ
ಬೆಂಗಳೂರು: ಸಿರಿಗನ್ನಡ ಮಿತ್ರ ತಂಡದ ವತಿಯಿಂದ ಜಯ ನಗರದಲ್ಲಿ ಅದ್ದೂರಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಂ.ಕೆ.ಇಂದಿರಾ ಅವರ ಪುತ್ರ ಹಾಗೂ ಹವ್ಯಾಸಿ ಬರಹಗಾರ ಎಂ.ಕೆ. ಮಂಜುನಾಥ್ ಮಾತನಾಡಿ, ತ್ರಿವೇಣಿಯವರ ಸ್ಫೂರ್ತಿಯಿಂದ ಬರವಣಿಗೆ ಆರಂಭಿಸಿದ ನಮ್ಮ ತಾಯಿ ಅವರು, ಕನ್ನಡದ ಅತ್ಯುತ್ತಮ ಕಾದಂಬರಿಗಾರ್ತಿ ಎನಿಸಿಕೊಂಡರು. ಅವರ ಬರವಣಿಗೆ ಮೆಚ್ಚಿದ ಕನ್ನಡ ನಾಡಿಗೆ ನಾನು ಋಣಿಯಾಗಿದ್ದೇನೆ ಎಂದರು.
ನಾನು ತಾಯಿಯಿಂದ ಬರವಣಿಗೆಗೆ ಸ್ಫೂರ್ತಿ ಪಡೆದುಕೊಂಡೆ. ನನ್ನ ನೂರಾರು ಲೇಖನಗಳು ವಿವಿಧ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಆದರೆ, ನನ್ನನ್ನು ಗುರುತಿಸಿ ಕಾರ್ಯಕ್ರಮಕ್ಕೆ ಕರೆದು ಸನ್ಮಾನಿಸಿದ ಸಿರಿಗನ್ನಡ ಮಿತ್ರತಂಡದ ಸದಸ್ಯರಿಗೆ ಅಭಿನಂದನೆಗಳು ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ, ಕನ್ನಡ ಹೋರಾಟಗಾರ ರಾಂಕಿ ಹನುಮಂತಯ್ಯ ಮಾತನಾಡಿ, ಇಂಗ್ಲೀಷ್ ನಮ್ಮ ಮನೆಯ ಅಡುಗೆ ಮನೆ ಸೇರಿಕೊಂಡಿದೆ. ಮೊದಲು ನಾವು ಕನ್ನಡ ಕಲಿಕೆಯನ್ನು ಅಡುಗೆ ಮನೆಯಿಂದ ಆರಂಭಿಸಬೇಕು. ಆಗ ಮಾತ್ರ ಕನ್ನಡ ಭಾಷೆ, ಸಂಸ್ಕೃತಿ ಹಸುರಾಗಿ ಉಳಿಯುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಬ್ಲೂ. ಕೆ. ವೆಂಕಟೇಶ್ ಮೂರ್ತಿ ವಹಿಸಿಕೊಂಡಿದ್ದು ಕಾರ್ಯಕ್ರಮದಲ್ಲಿ ಕನ್ನಡ ಶಿಕ್ಷಕರು, ಬರಹಗಾರರು ಆದ ಮಾಲತಿ ಆರಾಧ್ಯ, ಪತ್ರಕರ್ತರಾದ ವೆಂಕಟೇಶ್ ಆರ್.ದಾಸ್, ಸಾಮಾಜಿಕ ಹೋರಾಟಗಾರ ಸತೀಶ್ ರೆಡ್ಡಿ, ಮಹಿಳಾ ಹೋರಾಟಗಾರ್ತಿ ನಾಗರತ್ನಮ್ಮ ಭಾಗವಹಿಸಿದ್ದರು.
ರಮೇಶ್ ಜಮದಗ್ನಿ ಅವರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಕನ್ನಡ ನಾಡ ಪ್ರೇಮದ ಗೀತೆಗಳ ಗಾಯನ ನಡೆಯಿತು. ಸಂಸ್ಥೆಯ ಕಾರ್ಯದರ್ಶಿ ನಾರಾಯಣ ಶೆಟ್ಟಿ ವಂದನಾರ್ಪಣೆ ನಡೆಸಿಕೊಟ್ಟರು. ಶ್ರೀನಿವಾಸ ಕುಂಡಂತಾಯ, ಬಿ.ಎಲ್. ಶ್ರೀನಿವಾಸ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.


