ನಂದಿನಿ ಗೆ ಗೋಲ್ಡ್ ರೇಟ್ : ನಗರದಲ್ಲಿ ಶುರುವಾಗಿದೆ ಹಾಲಿನ ಪ್ಯಾಕೆಟ್ ಕದಿಯುವ ದಂಧೆ
ಬೆಂಗಳೂರು: ನಂದಿನಿ ದಿನದಿಂದ ದಿನಕ್ಕೆ ತನ್ನ ಜನಪ್ರಿಯತೆ ಹೆಚ್ಚಿಸಿಕೊಳದಳುತ್ತಿದ್ದು, ನಗರದಲ್ಲಿ ನಂದಿನ ಹಾಲಿನ ಪ್ಯಾಕೆಟ್ ಕದಿಯುವ ದಂಧೆ ಹೆಚ್ಚಾಗುತ್ತಿದೆ.
ಮುಂಜಾವಿನಲ್ಲಿ KMF ವಾಹನಗಳು ಹಾಲಿನ ಪ್ಯಾಕೆಟ್ ಇಳಿಸಿ ಹೊರಟ ತಕ್ಷಣ, ನಂದಿನಿ ಬೂತ್ ಗಳ ಮುಂದೆ ಜೋಡಿಸಿದ್ದಾಗ, ಜತೆಗೆ ಮನೆಯ ಹೊರಗೆ ಹಾಕಿದ್ದ ಹಾಲಿನ ಪ್ಯಾಕೆಟ್ ಮಂಗಮಾಯವಾಗುತ್ತಿವೆ ಎಂಬ ವರದಿಗಳು ಹೆಚ್ಚಾಗುತ್ತಿವೆ.
ಕಳೆದ ಒಂದು ವಾರದಿಂದೀಚೆಗೆ ಇಂತಹ ಎರಡು ಪ್ರಕರಣಗಳು ಬೆಳಕಿಗೆ ಬಂದಿದ್ದು, ನಂದಿನಿ ಹಾಲಿನ ಪ್ಯಾಕೇಟ್ ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕೋಣನಕುಂಟೆ ಮೆಟ್ರೋ ನಿಲ್ದಾಣದ ಬಳಿಯ ಹಾಲಿನ ಬೂತ್ ಬಳಿ, ದಿಲೀಪ್ ಎಂಬ ಹಾಲಿನ ವ್ಯಾಪಾರಿಗೆ ಸೇರಿದ ಒಂದು ಕ್ರೇಟ್ ನಂದಿನಿ ಹಾಲಿನ ಪ್ಯಾಕೆಟ್ ಗಳನ್ನು ಕದ್ದು ಬೈಕ್ ನಲ್ಲಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಆತ ಅವರನ್ನು ಹಿಂಬಾಲಿಸಿದರೂ ಪ್ರಯೋಜನವಾಗಿಲ್ಲ.
ಒಂದು ಕ್ರೇಟ್ ನಲ್ಲಿ 1500 ಕ್ಕೂ ಹೆಚ್ಚು ಬೆಲೆಯ ಹಾಲಿನ ಪ್ಯಾಕೆಟ್ ಇದ್ದವು ಎಂದು ದಿಲೀಪ್ ತಿಳಿಸಿದ್ದಾರೆ. ತಕ್ಷಣವೇ ಹೊಯ್ಸಳ ವಾಹನಕ್ಕೆ ಕರೆ ಮಾಡಿ ಪೊಲೀಸರು ಬಂದು ತಪಾಸಣೆ ನಡೆಸಿದರೂ ಕಳ್ಳರ ಪತ್ತೆ ಸಾಧ್ಯವಾಗಿಲ್ಲ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಬೈಕ್ ನ ನಂಬರ್ ಅಸ್ಪಷ್ಟವಾಗಿರುವ ಕಾರಣಕ್ಕೆ ಪೊಲೀಸರು ಕೂಡ ಪ್ರಕರಣ ಗಂಭೀರವಾಗಿ ತೆಗೆದುಕೊಂಡಿಲ್ಲ ಎನ್ನಲಾಗಿದೆ.
ಇನ್ನು ಇಂದಿರಾ ನಗರದ ಬಡಾವಣೆಗಳಲ್ಲಿ ಹಾಲು ವಿತರಕರು, ಮನೆಗಳ ಮುಂದಿನ ಚೀಲಗಳಲ್ಲಿ ಗ್ರಾಹಕರು ಎದ್ದೇಳುವ ವೇಳೆಗೆ ಹಾಲು ಹಾಕಿ ಹೋಗಿರುತ್ತಾರೆ. ಬಳಿಕ ಇಬ್ಬರು ಮಹಿಳೆಯರು ಬಂದು, ಹಾಲಿನ ಪ್ಯಾಕೆಟ್ ಗಳನ್ನೆಲ್ಲ ಎಗರಿಸಿ ಪರಾರಿಯಾಗುತ್ತಿದ್ದ ಘಟನೆ ಅನೇಕ ದಿನಗಳಿಂದ ನಡೆಯುತ್ತಿತ್ತು ಎನ್ನಲಾಗಿದೆ. ಇದು ಗ್ರಾಹಕರು ಮತ್ತು ಹಾಲು ವಿತರಕರ ನಡುವೆ ಆಗಾಗ ಅನುಮಾನದ ವಾತಾವರಣ ಮೂಡಿಸುತ್ತಿದ್ದು, ಕೊನೆಗೆ ಸಿಸಿಟಿವಿಯಲ್ಲಿ ಪರಿಶೀಲಿಸಿದಾಗ ಖತರ್ನಾಕ್ ಕಳ್ಳರ ಕರಾಮತ್ತು ಬಯಲಾಗಿದೆ.
ಕೆಲ ದಿನಗಳ ಹಿಂದೆ ನಂದಿನಿ ಬೂತ್ ಗಳಿಗೆ ತೆರಳಿ ತುಪ್ಪ ಖರೀದಿಯ ನೆಪದಲ್ಲಿ ಹತ್ತಾರು ಕೆಜಿ ತುಪ್ಪ ಪಡೆದು, ಬೈಕ್ ನಲ್ಲಿ ಪರಾರಿಯಾಗುತ್ತಿದ್ದ ನಾಲ್ಕೈದು ಘಟನೆಗಳು ವರದಿಯಾಗಿದ್ದವು. ಹೀಗೆ ನಂದಿನಿ ಹಾಲಿನ ಮೇಲೆ ಕಳ್ಳರ ಕಣ್ಣುಬಿದ್ದಿದ್ದು, ಬೆಲೆಬಾಳುವ ವಸ್ತುಗಳ ರೀತಿಯಲ್ಲಿ ನಂದಿನಿ ಹಾಲನ್ನು ಕದಿಯುವ ದಂಧೆ ಶುರುವಾಗಿದೆ ಎನ್ನಬಹುದು.


