ವಿಧಾನಸೌಧದ ಸಣ್ಣ ನೀರಾವರಿ ಇಲಾಖೆ ಉಪಕರಣಗಳು ಜಪ್ತಿ:
ಬೆಂಗಳೂರು: ವಿಧಾನಸೌಧದ ಸಣ್ಣ ನೀರಾವರಿ ಇಲಾಖೆ ಪೀಠೋಪಕರಣ ಸೇರಿ ಅನೇಕ ವಸ್ತುಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ.
ಕಲಬುರಗಿ ನ್ಯಾಯಾಲಯದ ಆದೇಶದ ಮೇರೆಗೆ ಸಣ್ಣ ನೀರಾವರಿ ಇಲಾಖೆಯ 13 ಚೇರ್ ಗಳು, 4 ಕಂಪ್ಯೂಟರ್, 4 ಝೆರಾಕ್ಸ್ ಮೆಷಿನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆ ಮೂಲಕ ನೀರಾವರಿಗೆ ಇಲಾಖೆಗೆ ನ್ಯಾಯಾಲಯ ಶಾಕ್ ನೀಡಿದೆ.
ಕಲಬುರಗಿ ಜಿಲ್ಲೆಯ ಕೊತ್ತಲ ಹಿಪ್ಪರಗಿ ಗ್ರಾಮದಲ್ಲಿ ಕೆರೆ ನಿರ್ಮಾಣಕ್ಕಾಗಿ ಜಮೀನು ವಶಕ್ಕೆ ಪಡೆಯಲಾಗಿತ್ತು. ಆದರೆ, ಅದಕ್ಕೆ ನೀಡಬೇಕಾದ ಪರಿಹಾರ ನೀಡುವಲ್ಲಿ ಇಲಾಖೆ ಮೀನಾಮೇಷ ಎಣಿಸುತ್ತಿತ್ತು. ಈ ಸಂಬಂಧ ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಕಲಬುರಗಿ ನ್ಯಾಯಾಲಯ ಸಣ್ಣ ನೀರಾವರಿ ಇಲಾಖೆಗೆ ಅನೇಕ ಸಲ ನೋಟೀಸ್ ನೀಡಿ, ರೈತರಿಗೆ ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಆದರೆ, ನ್ಯಾಯಾಲಯದ ಆದೇಶವನ್ನು ಪಾಲಿಸದೆ ನೀರಾವರಿ ಇಲಾಖೆ ಅಧಿಕಾರಿಗಳು ಅಸಡ್ಡೆ ತೋರಿದ್ದರು.
ನೀರಾವರಿ ಇಲಾಖೆಯ ಅಸಡ್ಡೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಇಲಾಖೆಯ ವಸ್ತುಗಳನ್ನು ವಶಕ್ಕೆ ಪಡೆಯಲು ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಅಧಿಕಾರಿಗಳ ಸಮ್ಮುಖದಲ್ಲಿ ಜಪ್ತಿ ಕಾರ್ಯ ನಡೆದಿದೆ.


