ರಾಜಕೀಯ ಸುದ್ದಿ

ಕ್ರೀಡೆ ಮಕ್ಕಳಲ್ಲಿ ಶಿಸ್ತು, ದೃಢ ವಿಶ್ವಾಸ ಬೆಳೆಸುತ್ತದೆ: ಗುಬ್ಬಿಗೂಡು ರಮೇಶ್

Share It

ಬೆಂಗಳೂರು: ಕ್ರೀಡೆಯಿಂದ ಮಕ್ಕಳ ದೈಹಿಕ ಸಾಮರ್ಥ್ಯ ಮಾತ್ರವಲ್ಲ ಅವರ ಮಾನಸಿಕ ದೃಢತೆ, ಶಿಸ್ತು ಸಂಯಮಗಳೆಲ್ಲವೂ ಬೆಳೆವಣಿಗೆಯಾಗುತ್ತವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಗುಬ್ಬಿಗೂಡು ರಮೇಶ್ ತಿಳಿಸಿದರು.

ರಾಜರಾಜೇಶ್ವರಿನಗರದ ಪಂಚಶೀಲ ವೆಲ್‌ಫೇರ್ ಅಸೋಸಿಯೇಷನ್ ಹಾಗೂ ಪಂಚಶೀಲ ಗ್ರೂಪ್ ಆಫ್ ಇನ್ಸಿ÷್ಟಟ್ಯೂಟ್ ವತಿಯಿಂದ ಆಯೋಜಿಸಿದ್ದ ಅಂತರ್ ಕಾಲೇಜು ಕ್ರೀಡಾಕೂಟವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಮಕ್ಕಳಲ್ಲಿ ಕ್ರೀಡೆಗಳು ಸದೃಢ ದೇಹ ಹಾಗೂ ಮನಸ್ಸನ್ನು ಬೆಳೆಸುತ್ತವೆ. ಕ್ರೀಡಾ ಸಾಧಕರು ಇಂದು ಜಗತ್ತಿನ ಪ್ರಭಾವಿ ವ್ಯಕ್ತಿಗಳಾಗಿ ಬೆಳೆದಿದ್ದು, ಅವರನ್ನು ಹಿಂಬಾಲಿಸಿ ದೊಡ್ಡ ಕ್ರೀಡಾಪಟುಗಳಾಗಿ ಬೆಳೆಯಿರಿ ಎಂದು ಕರೆ ನೀಡಿದರು.

ಸಾಧಕರು ಹುಟ್ಟುವುದೇ ಬಡತನದ ಬೇಗೆಯಲ್ಲಿ, ಹಳ್ಳಿಗಾಡಿನ ಜನಜೀವನದ ನಡುವೆ. ಹೀಗಾಗಿ, ಇಲ್ಲದ್ದರ ಬಗ್ಗೆ ಯೋಚನೆ ಮಾಡುವ ಬದಲು ಇರುವ ಅವಕಾಶವನ್ನು ಬಳಸಿಕೊಂಡು, ಬೆಳೆಯುವುದು ಬುದ್ದಿವಂತರ ಲಕ್ಷಣ. ಮುಂದೆ ಗುರಿಯಿರಬೇಕು, ಹಿಂದೆ ಗುರುವಿರಬೇಕು ಎಂಬ ಮಾತಿನಂತೆ ಗುರಿಯಿಟ್ಟುಕೊಂಡು, ಗುರುವಿನ ಮಾರ್ಗದರ್ಶನದಲ್ಲಿ ಸಾಧನೆಯ ಹಾದಿಯಲ್ಲಿ ನಡೆಯಬೇಕು ಎಂದರು.

ಡಿ.ಎಸ್.ವೀರಯ್ಯ ಅವರು, ಸಮಾಜಮುಖಿ ಚಿಂತನೆಯನ್ನಿಟ್ಟುಕೊAಡು ವಿದ್ಯಾಸಂಸ್ಥೆ ನಡೆಸುತ್ತಿದ್ದಾರೆ. ಇಂದು ಶಿಕ್ಷಣ ಕ್ಷೇತ್ರ ದುಡ್ಡು ಮಾಡುವವರು ನಡೆಸುವ ಉದ್ಯಮವಾಗಿದೆ. ಆದರೆ, ವೀರಯ್ಯ ಅವರು, ಸಮಾಜಮುಖಿಯಾಗಿ ಚಿಂತನೆ ನಡೆಸಿ, ಕಡಿಮೆ ವೆಚ್ಚದಲ್ಲಿ ಬಡವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಕಡೆಗೆ ಶ್ರಮಿಸುತ್ತಿದ್ದಾರೆ. ಇಂತಹವರಿಗೆ ನಾವೆಲ್ಲ ಸಹಕಾರ ನೀಡಬೇಕಿದೆ ಎಂದು ತಿಳಿಸಿದರು.

ಪತ್ರಕರ್ತರಾದ ವೆಂಕಟೇಶ ಆರ್.ದಾಸ್ ಮಾತನಾಡಿ, ಕ್ರೀಡೆ ನಮ್ಮೆಲ್ಲರ ದೇಹವನ್ನು ಮಾತ್ರವಲ್ಲ ಮನಸ್ಸನ್ನು ಬದಲಾಯಿಸುತ್ತದೆ. ಕ್ರೀಡೆಗೆ, ಪುಸ್ತಕಕ್ಕೆ, ಮಾತಿಗೆ ಜಗತ್ತನ್ನೇ ಬದಲಾಯಿಸುವ ಶಕ್ತಿಯಿದೆ. ಅನೇಕ ಸಾಧಕರು ದೊಡ್ಡವರು ಹೇಳಿದ ಮಾತನ್ನು ಕೇಳಿ ತಮ್ಮ ಜೀವನ ಬದಲಾಯಿಸಿಕೊಂಡಿದ್ದಾರೆ. ಹೀಗಾಗಿ, ನೀವು ನಿಮ್ಮ ಮುಂದಿನ ಜೀವನವನ್ನು ಬದಲಾಯಿಸುವ ಓದು, ಕ್ರೀಡೆ ಮತ್ತು ದೊಡ್ಡವರ ಮಾತಿನ ಕಡೆಗೆ ಗಮನ ನೀಡಿದ ಸಾಧನೆಯ ಹಾದಿಯಲ್ಲಿ ನಡೆಯಿರಿ ಎಂದು ತಿಳಿಸಿದರು.

ಡಿ.ಎಸ್. ವೀರಯ್ಯ ಅವರನ್ನು ನಾನು ೧೫ ವರ್ಷದಿಂದ ಕಂಡಿದ್ದೇನೆ. ಅವರು ಎಂದೂ ಹಣಕ್ಕಾಗಿ ಆಸೆ ಪಟ್ಟವರಲ್ಲ, ಸಮಾಜದ ಏಳಿಗೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ದುಡಿಯುತ್ತಿದ್ದಾರೆ. ಅವರ ಒಳ್ಳೆಯ ಕೆಲಸಕ್ಕೆ ನಾವೆಲ್ಲ ಕೈಜೋಡಿಸಬೇಕಿದೆ. ಮುಂದೆ ಪಂಚಶೀಲ ಶಿಕ್ಷಣ ಸಂಸ್ಥೆ ಮತ್ತಷ್ಟು ಸದೃಢವಾಗಿ ಬೆಳೆಯುವ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಗುಬ್ಬಿಗೂಡು ರಮೇಶ್ ಉದ್ಘಾಟನೆ ಮಾಡಿದರೆ, ವೆಂಕಟೇಶ ಆರ್.ದಾಸ್ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರು ಮಾಜಿ ವಿಧಾನ ಪರಿಷತ್ ಸದಸ್ಯರೂ ಆದ ಡಿ.ಎಸ್.ವೀರಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಂಚಶೀಲ ಕಾಲೇಜಿನ ಪ್ರಾಂಶುಪಾಲರಾದ ಸೊಂಬೇಗೌಡ ಹಾಗೂ ಕಾರ್ಯಕ್ರಮದ ಸಂಯೋಜನಾಧಿಕಾರಿ ಲಿಂಗಮೂರ್ತಿ ಭಾಗವಹಿಸಿದ್ದರು.

ಬಾಕ್ಸ್:

ಬೌದ್ಧಿಕ ಮತ್ತು ಶಾರೀರಿಕ ಶಕ್ತಿಗೆ ಕ್ರೀಡೆಯೇ ಸ್ಫೂರ್ತಿ: ಕ್ರೀಡೆ ಶಾರೀರಿಕ ಶಕ್ತಿಯನ್ನು ಮಾತ್ರವಲ್ಲ, ಬೌದ್ಧಿಕ ಶಕ್ತಿಯನ್ನು ಬೆಳೆಸುತ್ತದೆ. ಶಿಸ್ತು ನಮಗೆ ಬಹಳ ಮುಖ್ಯವಾಗಿ ಬೇಕಾದ ಅಂಶ. ನಾವು ಎಷ್ಟೆಲ್ಲ ಸಂಕಷ್ಟಗಳಿದ್ದರೂ, ಶಿಸ್ತು, ಶ್ರಮ ಮತ್ತು ಬದ್ಧತೆಯ ಕಾರಣಗಳಿಂದ ಇಂದು ಸಆಧಕರ ಸ್ಥಾನದಲ್ಲಿದ್ದೇವೆ. ನಮ್ಮ ಸಂಸ್ಥೆಯಲ್ಲಿ ಕಲಿಯುವ ಮಕ್ಕಳು ಇಂತಹದ್ದೇ ಹಾದಿಯಲ್ಲಿ ನಡೆದು ಮುಂದೆ ಮಹಾನ್ ಸಾಧಕರಾಗಿ ಗುರುತಿಸಿಕೊಂಡು, ನಮ್ಮ ಸಂಸ್ಥೆಗೆ ಮಾತ್ರವಲ್ಲ, ಅವರ ಹೆತ್ತವರಿಗೂ ಹೆಸರು ತಂದುಕೊಡಬೇಕು ಎಂಬುದು ನನ್ನ ಹೆಬ್ಬಯಕೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಅಭಿಪ್ರಾಯ ಪಟ್ಟರು.

ನಮ್ಮ ಸಂಸ್ಥೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಎಂಬುದು ಬಡತನ ರೇಖೆಯಲ್ಲಿರುವವರಿಗೆ ಮತ್ತು ಸಮಾಜದಲ್ಲಿ ಕಡೆಗಣನೆಗೆ ಒಳಗಾದವರಿಗೆ ಸಿಗಬೇಕು ಎಂಬ ಉದ್ದೇಶ ನಮ್ಮದು. ಕೆಎಎಸ್, ಐಎಎಸ್ ಮತ್ತು ಬ್ಯಾಂಕಿAಗ್ ಪರೀಕ್ಷೆಗಳನ್ನು ಎದುರಿಸುವ ಕಲೆಯನ್ನು ಹೇಳಿಕೊಡುವ ಮೂಲಕ ಬದುಕು ಕಟ್ಟಿಕೊಡುವ ಕೆಲಸವನ್ನು ನಮ್ಮ ಸಂಸ್ಥೆ ಮಾಡುತ್ತದೆ. ಇದನ್ನು ಮತ್ತಷ್ಟು ಜನರಿಗೆ ವಿಸ್ತರಣೆ ಮಾಡಬೇಕು ಎಂಬುದು ನನ್ನ ಹೆಬ್ಬಯಕೆ ಎಂದರು.

೨೫ ಕ್ಕೂ ಹೆಚ್ಚು ಶಾಲೆಯ ತಂಡಗಳು ಭಾಗಿ: ಕ್ರೀಡಾಕೂಟದಲ್ಲಿ ೨೫ಕ್ಕೂ ಹೆಚ್ಚು ಶಾಲೆ ಮತ್ತು ಕಾಲೇಜುಗಳಿಂದ ತಂಡಗಳು ಆಗಮಿಸಿದ್ದವು. ಕ್ರೀಡಾಕೂಟವು ವಾಲಿಬಾಲ್, ಥ್ರೋ ಬಾಲ್ ಹಾಗೂ ಕಬ್ಬಡಿ ವಿಭಾಗದಲ್ಲಿ ಪಂದ್ಯಗಳು ನಡೆಯಿತು. ಮೊದಲ ದಿನದ ಕೂಟದಲ್ಲಿ ಲೀಗ್ ಹಂತದಲ್ಲಿ ಪಂದ್ಯಗಳು ಪೂರ್ಣಗೊಂಡಿದ್ದು, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಶನಿವಾರ ನಡೆಯಲಿವೆ. ಸಮಾರೋಪ ಸಮಾರಂಭದಲ್ಲಿ ಖ್ಯಾತ ನಟಿ ಅಮೂಲ್ಯ ಜಗದೀಶ್, ಮಾಜಿ ಉಪಮಹಾಪೌರರಾದ ಜಿ.ಎಚ್. ರಾಮಚಂದ್ರ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಡಿ.ಎಸ್.ವೀರಯ್ಯ ಅವರು ಭಾಗವಹಿಸಲಿದ್ದಾರೆ.


Share It

You cannot copy content of this page