ಡ್ರೋನ್ ಪ್ರತಾಪ್ ನನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿದ ನ್ಯಾಯಾಲಯ
ಮಧುಗಿರಿ: ಸೋಡಿಯಂ ಸ್ಪೋಟಿಸಿದ ಆರೋಪದಲ್ಲಿ ಬಂಧನವಾಗಿದ್ದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ನನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಮಧುಗಿರಿ ನ್ಯಾಯಾಲಯ ಆದೇಶ ನೀಡಿದೆ.
ಡ್ರೋನ್ ಪ್ರತಾಪ್ ಎರಡು ದಿನಗಳ ಹಿಂದೆ ಮಿಡಿಗೇಶಿ ವ್ಯಾಪ್ತಿಯ ಜಮೀನೊಂದರ ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿದ ಸ್ಫೋಟಕವನ್ನು ಸಿಡಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಡ್ರೋನ್ ಪ್ರತಾಪ್ ಅವರನ್ನು ಮಿಡಿಗೇಶಿ ಪೊಲೀಸರು ಬಂಧಿಸಿದ್ದರು.
ಮಿಡಿಗೇಶಿ ಪೊಲೀಸರು ಡ್ರೋನ್ ಪ್ರತಾಪ್ ನನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಪೋಲಿಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದೆ.
ಬಿಗ್ ಬಾಸ್ ನಲ್ಲಿ ಖ್ಯಾತಿ ಪಡೆಯುವ ಮೊದಲು ಡ್ರೋನ್ ಪ್ರತಾಪ್ ಕಾಗೆ ಪ್ರತಾಪ್ ಎಂದು ವ್ಯಾಪಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಪಖ್ಯಾತಿ ಪಡೆದಿದ್ದರು. ಸುಳ್ಳು ಹೇಳಿದ್ದ ಆರೋಪದಲ್ಲಿ ಟೀಕೆಗಳಿಗೆ ಪಾತ್ರರಾಗಿದ್ದರು. ಆದರೆ, ಕೋವಿಡ್ ನಿಯಮ ಉಲ್ಲಂಘನೆಯ ಕಾರಣಕ್ಕೆ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು.
ಇದೀಗ ಡ್ರೋನ್ ಪ್ರತಾಪ್ ಎರಡನೇ ಬಾರಿಗೆ ಅರೆಸ್ಟ್ ಆಗಿದ್ದು, ಇದೀಗ ತಮ್ಮ ಡ್ರೋನ್ ಹಾರಿಸುವ ಪ್ರಯತ್ನದಲ್ಲಿ ಮಾಡಿಕೊಂಡ ಯಡವಟ್ಟಿನಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದರಿಂದ ಇದೀಗ ಪೊಲೀಸರ ಅತಿಥಿಯಾಗಬೇಕಿದೆ.


