ತಿರುಪತಿ: ತನ್ನ 12 ವರ್ಷದ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಕುವೈತ್ ನಿಂದ ಬಂದು ಕೊಲೆ ಮಾಡಿ ಮತ್ತೇ ಕುವೈತ್ ಗೆ ಪರಾರಿಯಾದ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಓಬುಲಾವಾರಿಪಲ್ಲಿ ಗ್ರಾಮದ ದಂಪತಿಗಳು ಕುವೈತ್ ಗೆ ಕೆಲಸದ ನಿಮಿತ್ತ ಹೋಗಿ ನೆಲೆಸಿದ್ದರು. ತಮ್ಮ 12 ವರ್ಷದ ಮಗಳನ್ನು ಅತ್ತಿಗೆ ಮನೆಯಲ್ಲಿ ಬಿಟ್ಟಿದ್ದರು. ಆಗ ಆಕೆಗೆ ಅತ್ತಿಗೆಯ ಮಾವ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎನ್ನಲಾಗಿದೆ. ಈ ವಿಷಯವನ್ನು ಬಾಲಕಿ ತನ್ನ ತಾಯಿಗೆ ತಿಳಿಸಿದ್ದು, ಆಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಎನ್ನಲಾಗಿದೆ.
ಪೊಲೀಸರು ದೂರಿನ ಅನ್ವಯ ಯಾವುದೇ ಕ್ರಮ ತೆಗೆದುಕೊಳ್ಳದೆ ಎರಡು ಕಡೆಯವರನ್ನು ಕರೆಸಿ ಸಂಧಾನ ಮಾಡಿ ಕಳುಹಿಸಿದ್ದು, ಆಕೆಗೆ ಮತ್ತೇ ದೌರ್ಜನ್ಯ ನಡೆದಿದೆ ಎಂಬುದು ತಂದೆಗೆ ಗೊತ್ತಾಗಿದೆ. ಹೀಗಾಗಿ, ಕುವೈತ್ ನಿಂದ ಡಿ. 7 ರಂದು ಗ್ರಾಮಕ್ಕೆ ಆಗಮಿಸಿದ ತಂದೆ, ಚಾಕುವಿನಿಂದ ಇರಿದು ಆರೋಪಿಯನ್ನು ಕೊಲೆ ಮಾಡಿ, ಮತ್ತೇ ಪರಾರಿಯಾಗಿದ್ದಾನೆ.
ಇತ್ತ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕೊಲೆಗಾರ ಯಾರು ಎಂದು ತಲೆಕೆಡಿಸಿಕೊಂಡಿದ್ದರು. ಇದೀಗ ಕೊಲೆ ಆರೋಪಿಯೇ ವಿಡಿಯೋ ಮಾಡಿ, ತನ್ನ ಮಗಳ ಮೇಲೆ ದೌರ್ಜನ್ಯ ನಡೆದಿದ್ದು ಹಾಗೂ ಪೊಲೀಸರ ಅಸಹಕಾರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾನೆ. ಜತೆಗೆ, ತಾನು ಶರಣಾಗುವುದಾಗಿ ತಿಳಿಸಿದ್ದಾನೆ. ಇದೀಗ ವಿಡಿಯೋ ಸಂಚಲನ ಮೂಡಿಸಿದೆ.
ಆದರೆ, ಪೊಲೀಸರು ಆರೋಪಿಗಳ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ. ತಮ್ಮ ಠಾಣೆಯಲ್ಲಿ ಯಾವುದೇ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿಲ್ಲ. ಇಡೀ ಕುಟುಂಬಸ್ಥರ ನಡುವೆ ಕೌಟುಂಬಿಕ ಕಲಹ ನಡೆಯುತ್ತಿದ್ದು, ಈ ಕಾರಣಕ್ಕೆ ಕೊಲೆ ನಡೆದಿದೆ. ಆದರೆ, ಲೈಂಗಿಕ ದೌರ್ಜನ್ಯದ ಕತೆ ಕಟ್ಟಲಾಗುತ್ತಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಆರೋಪಿಯನ್ನು ಬಂಧಿಸಿ, ಸೂಕ್ತ ತನಿಖೆ ನಡೆಸಿ ಸತ್ಯಾಂಶ ಹೊರಗೆಳೆಯುವ ಭರವಸೆ ನೀಡಿದ್ದಾರೆ. ಆದರೆ, ಪೊಲೀಸ್ ವ್ಯವಸ್ಥೆಯ ವೈಫಲ್ಯದಿಂದ ತನ್ನ ಅಪ್ರಾಪ್ತ ಮಗಳ ಮೇಲೆ ದೌರ್ಜನ್ಯ ನಡೆಸಿದ ವ್ಯಕ್ತಿಯ ಕೊಲೆ ಮಾಡಿದ್ದೇನೆ ಎಂದ ವ್ಯಕ್ತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಪೊಲೀಸರ ಕಾರ್ಯವೈಖರಿ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ತನಿಖೆಯಿಂದಷ್ಟೇ ಸತ್ಯಾಂಶ ಹೊರಗೆ ಬರಬೇಕಿದೆ.