ಮೀರತ್ : ದಲಿತ ಕಾನ್ಸ್ ಟೇಬಲ್ ಮದುವೆ ದಿಬ್ಬಣ ತಮ್ಮ ಬೀದಿಯಲ್ಲಿ ಸಾಗಬಾರದು ಎಂದು ಕಲ್ಲುತೂರಾಟ ನಡರಸಿದ ಘಟನೆ ಬುಲಂದರ್ ಪುರ ಪ್ರದೇಶದಲ್ಲಿ ನಡೆದಿದೆ.
ಘಟನೆಯಲ್ಲಿ ಮದುವೆಯಲ್ಲಿ ಭಾಗವಹಿಸಿದ್ದ ಅನೇಕ ಅತಿಥಿಗಳು ಗಾಯಗೊಂಡಿದ್ದು, ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಐವರು ಆರೋಪಗಳನ್ನು ಬಂಧಿಸಿದ್ದಾರೆ. ಎಸ್.ಸಿ. ಎಸ್.ಟಿ ಕಾಯಿದೆ ಸೇರಿದಂತೆ ಅನೇಕ ಕಾಯಿದೆಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಜಿಯಾಬಾದ್ ನಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಬಿನ್ ಸಿಂಗ್ ಎಂಬುವವರ ಮದುವೆ ಲಖಾವತಿಯಲ್ಲಿ ಕಾನ್ಸ್ ಟೇಬಲ್ ಆಗಿರುವ ವಧುವಿನ ಜತೆಗೆ ನಡೆದಿತ್ತು. ರಾತ್ರಿ ಎಂಟರ ಸುಮಾರಿಗೆ ಅವರ ಮದುವೆ ದಿಬ್ಬಣ, ಜಹಂಗೀರಾಬಾದ್ ನ ಟಿಟೋನಾ ಗ್ರಾಮದ ಮುಲಕ ಹಾಯ್ದು ಹೋಗುವಾಗ 20-25 ಠಾಕೂರ್ ಸಮುದಾಯಕ್ಕೆ ಸೇರಿದ ಯುವಕರ ಗುಂಪು ದಿಬ್ಬಣದ ಮೇಲೆ ಅಟ್ಯಾಕ್ ಮಾಡಿತ್ತು.
ಈ ವೇಳೆ ಅನೇಕ ಮಹಿಳೆಯರ ಜತೆಗೆ ಅಸಭ್ಯವಾಗಿ ವರ್ತಿಸಿದ್ದು, ಕೆಲವರ ಮೇಲೆ ಹಲ್ಲೆ ನಡೆಸಲಾಗಿದೆ. ಆರೋಪಿಗಳಲ್ಲಿ ಕೆಲವರು ನಮ್ಮ ಮದುವೆಯ ಆರತಕ್ಷತೆ ವೇಳೆ ಭಾಗವಹಿಸಿದ್ದವರೇ ಆಗಿದ್ದಾರೆ. ಆದರೆ, ತಮ್ಮ ಬೀದಿಯಲ್ಲಿ ದಲಿತರ ಮದುವೆ ದಿಬ್ಬಣ ಸಾಗುವುದು ಅವರಿಗೆ ಇಷ್ಟವಿರಲಿಲ್ಲ ಎಂದು ವರನ ಸಂಬಂಧಿಕರು ಆರೋಪಿಸಿದ್ದಾರೆ.
ಜೋರಾಗಿ ಡಿ.ಜೆ. ಸೌಂಡ್ ಹಾಕಿದ್ದಾರೆ ಎಂದು ಆರೋಪಿಸುತ್ತಾ, ಗಲಾಟೆ ಆರಂಭಿಸಿದ ಯುವಕರು, ನಂತರ ವರ ಕಾನ್ಸ್ ಟೇಬಲ್ ರಾಬಿನ್ ಸಿಂಗ್ ಹಾಗೂ ವಧುವನ್ನು ಕುದುರೆಯಿಂದ ಕೆಳಗೆ ಎಳೆದು ಹಾಕಿದ್ದಾರೆ, ಹೀಗಾಗಿ, ಅವರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಇದು ಡಿಜೆ ಕಾರಣಕ್ಕೆ ಶುರುವಾದ ಗಲಾಟೆಯಾಗಿದ್ದು, ಐವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ದಲಿತರ ಮೇಲಿನ ದೌರ್ಜನ್ಯ ಕಾಯಿದೆ ಸೇರಿದಂತೆ ವಿವಿಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ಮಿಶ್ರಾ ತಿಳಿಸಿದ್ದಾರೆ.