ಉಪಯುಕ್ತ ಕ್ರೀಡೆ ಸುದ್ದಿ

ಕರಾವಳಿಯ ಕಂಬಳಕ್ಕೆ 5 ಲಕ್ಷ ರೂ. ನೀಡಲು ಆದೇಶ

Share It

ಬೆಂಗಳೂರು: ಕರಾವಳಿಯ ಸಾಂಸ್ಕೃತಿಕ ಕ್ರೀಡೆ ಕಂಬಳಕ್ಕೆ ರಾಜ್ಯ ಸರ್ಕಾರ 5 ಲಕ್ಷ ರೂಪಾಯಿ ನೀಡಲು ಸರ್ಕಾರ ಆದೇಶ ಹೊರಡಿಸಿದೆ.

ಬೇಡಿಕೆ ಇಟ್ಟಿದ್ದರೂ ಕೂಡ ಸರ್ಕಾರ ಕಳೆದ ವರ್ಷ ಕಂಬಳಕ್ಕೆ ಅನುದಾನ ನೀಡಿರಲಿಲ್ಲ. ಈ ಬಗ್ಗೆ ಕಂಬಳಪ್ರಿಯರು ಬೇಸರ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲೂ ಕರಾವಳಿಯ ಶಾಸಕರು ಬೇಡಿಕೆ ಸಲ್ಲಿಸಿದ್ದರು. ಸ್ವತಃ ಸ್ಪೀಕರ್ ಯುಟಿ ಖಾದರ್ ಕಂಬಳ ಪರ ಬ್ಯಾಟಿಂಗ್ ಮಾಡಿದ್ದರು.

ಸರ್ಕಾರ ನೆರವು ಕೊಡದಿದ್ದರೆ ನಾವೇ ಹಣ ಸಂಗ್ರಹಿಸಿ ಕಂಬಳ ಮಾಡಲು ಗೊತ್ತು ಎಂದು ಚಾಟಿ ಬೀಸಿದ್ದರು. ಮುಖ್ಯಮಂತ್ರಿಗಳ ಶಿಫಾರಸಿನ ಮೇರೆಗೆ ಪ್ರವಾಸೋದ್ಯಮ ಸಚಿವ ಹೆಚ್​​ಕೆ ಪಾಟೀಲ್ ಆದೇಶ ಹೊರಡಿಸಿದ್ದಾರೆ. 2024- 25 ನೇ ಸಾಲಿನ 24 ಜೋಡು ಕರೆ ಕಂಬಳಗಳಿಗೆ ತಲಾ 5 ಲಕ್ಷ ರೂ. ಘೋಷಣೆಯಾಗಿದೆ.

ಕರವಾಳಿಯಲ್ಲಿ ಒಟ್ಟು 25 ಕಂಬಳಗಳು ನಡೆಯುತ್ತವೆ. ಪ್ರತಿ ಕಂಬಳವನ್ನು ನೇರವಾಗಿ ಒಂದು ಲಕ್ಷ ಜನ ವೀಕ್ಷಿಸುತ್ತಾರೆ. 2020 – 21ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ 10 ಕಂಬಳಗಳಿಗೆ ತಲಾ 5 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಉಡುಪಿ ಜಿಲ್ಲೆಯಲ್ಲಿ ನಡೆಯುವ 53 ಸಾಂಪ್ರದಾಯಿಕ ಕಂಬಳಗಳಿಗೂ ಅನುದಾನ ಕೋರಲಾಗಿತ್ತು.

ಕಳೆದ ವರ್ಷ 50 ಲಕ್ಷ ರೂ. ಘೋಷಿಸಿದ್ದ ಸರ್ಕಾರ ನಂತರ ಅನುದಾನ ನೀಡಿರಲಿಲ್ಲ. ಹಾಗಾಗಿ ಘೋಷಣೆಯಾದ 50 ಲಕ್ಷ ರೂ. ಹಣ ತುರ್ತಾಗಿ ಬಿಡುಗಡೆ ಮಾಡುವಂತೆ ಕಂಬಳ ಸಮಿತಿ ಒತ್ತಾಯಿಸಿದೆ. ಅದಲ್ಲದೆ ಸಾಂಪ್ರದಾಯಿಕ ಕಂಬಳಗಳಿಗೂ 50 ಲಕ್ಷ ರೂ. ಬಿಡುಗಡೆ ಮಾಡುವಂತೆ ಮನವಿ ಮಾಡಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.


Share It

You cannot copy content of this page