ಗದಗ: ಎಟಿಎಂ ಕಾಡ್೯ ಪಿನ್ ಸೆಟ್ ಮಾಡಿಕೊಡುತ್ತೇನೆ ಅಂತ ಹೇಳಿ ಕಾರ್ಡ್ ಬದಲಾಯಿಸಿ, ಹಣ ದೋಚುತ್ತಿದ್ದ ಕಳನನ್ನು ಬೆಟಗೇರಿ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಿಕ್ಕವೇನೂರು ಗ್ರಾಮದ ನಿವಾಸಿಯಾಗಿರುವ ಸತೀಶ್ ಬಿರಾದಾರ ಬಂಧಿತ ಆರೋಪಿ.
ಬೆಟಗೆರಿ ನಗರದ ಮಹಾತ್ಮಾ ಗಾಂಧಿ ಸರ್ಕಲ್ ಬಳಿ ಇರುವ ಕೆನರಾ ಬ್ಯಾಂಕ್ ಎಂಟಿಎಂ ಬಳಿ ಸತೀಶ್ ಬಿರಾದಾರ ನಿಂತಿದ್ದನು. ಇದೇ ವೇಳೆ ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ಹುಲಿಗೆವ್ವ ಕುರಿ ಎಂಬುವರು ಎಟಿಎಂಗೆ ಬಂದಿದ್ದಾರೆ. ಹೊಸ್ ಎಟಿಎಂ ಕಾರ್ಡ್ಗೆ ಪಿನ್ ಸೆಟ್ ಮಾಡಲು ಪರದಾಡುತ್ತಿದ್ದರು. ಹುಲಿಗೆವ್ವ ಅವರ ಪರದಾಟ ಕಂಡು ಎಂಟಿಎಂ ಒಳಗೆ ಹೋದ ಸತೀಶ್ ಪಿನ್ ಸೆಟ್ ಮಾಡಿಕೊಡುವುದಾಗಿ ಹೇಳಿದ್ದಾನೆ.
ಬಳಿಕ, ನಿಮ್ಮ ಎಟಿಎಂಗೆ ಪಿನ್ ಸೆಟ್ ಆಗಿದೆ ಎಂದು ಹೇಳಿದ್ದಾನೆ. ನಂತರ ಹುಲಿಗೆವ್ವ ಅವರಿಗೆ ಬೇರೆ ಎಟಿಎಂ ಕಾರ್ಡ್ ಕೊಟ್ಟು ಕಳಿಸಿದ್ದಾನೆ. ನಂತರ, ಹುಲಿಗೆವ್ವ ಅವರ ಎಂಟಿಎಂ ಕಾರ್ಡ್ನಿಂದ ಹಂತ ಹಂತವಾಗಿ 62 ಸಾವಿರ ಹಣ ಡ್ರಾ ಮಾಡಿದ್ದಾನೆ. ಹಣ ಕಳೆದುಕೊಂಡು ಹುಲಿಗೆವ್ವ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಸತೀಶ್ ಬಿರಾದಾರ ದುಶ್ಚಟಗಳಿಗೆ ಬಲಿಯಾಗಿದ್ದಾನೆ. ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಾ, ಹುಬ್ಬಳ್ಳಿ, ಬಾಗಲಕೋಟೆ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಎಟಿಎಂ ಬಳಿ ನಿಂತು ವಂಚನೆ ಮಾಡುತ್ತಿದ್ದ. ಹಣ ಖಾಲಿಯಾದ ಮೇಲೆ ಮತ್ತೆ, ಇದೇ ಕೃತ್ಯ ತೊಡಗಿಸುಕೊಳ್ಳುತ್ತಿದ್ದ. ಗದಗ ನಗರದಲ್ಲಿ ತನ್ನ ಕೈಚಳಕ ತೋರಿಸಿದ್ದ ಸತೀಶ್ನ ಎಲ್ಲ ಕೃತ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸಿಸಿಟಿವಿಯ ದೃಶ್ಯಗಳನ್ನು ಆಧರಿಸಿದ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.