ಹೊಸದಿಲ್ಲಿ ; ವಿಚಾರಣಾಧೀನ ಖೈದಿಯೊಬ್ಬರಿಗೆ ನ್ಯಾಯಾಲಯ ಜಾಮೀನು ನೀಡಿದ್ದರೂ ಆತ ಕಳೆದ ಐದು ವರ್ಷದಿಂದ ತನ್ನ ಮನೆಗೆ ವಾಪಸಾಗಲು ಸಾಧ್ಯವಾಗಿಲ್ಲ, ಇದಕ್ಕೆ ಕಾರಣ ಆತ ತನ್ನ ವಿಳಾಸವನ್ನೇ ಮರೆತಿರುವುದು.
2019 ರಲ್ಲಿ ಡ್ರಗ್ಸ್ ಪ್ರಕರಣವೊಂದರಲ್ಲಿ ಜಾರ್ಖಂಡ್ ಮೂಲದ ವ್ಯಕ್ತಿಯನ್ನು ಬಂಧಿಸಿದ್ದ ಪೊಲೀಸರು ಸಂಬಲ್ ಪುರ ಜೈಲಿನಲ್ಲಿಟ್ಟಿದ್ದರು. 34 ವರ್ಷದ ಜಭೀರಾ ಸತ್ತಾರ್ ಎಂಬ ವ್ಯಕ್ತಿ ನೀಡಿದ ವಿಳಾಸ ತಪ್ಪಾಗಿದ್ದು, ಆತನ ಪೋಷಕರು ಕೂಡ ಯಾವುದೇ ಅಧಿಕಾರಿಗಳನ್ನು ಸಂಪರ್ಕಿಸಿಲ್ಲ ಎನ್ನಲಾಗಿದೆ.
2019 ರಲ್ಲಿಯೇ ಜಿಲ್ಲಾ ನ್ಯಾಯಾಲಯ ಆತನಿಗೆ ಜಾಮೀನು ನೀಡಿತ್ತು. ಆದರೆ, ವಿಳಾಸ ತಪ್ಪಾಗಿದ್ದ ಕಾರಣ ಹಾಗೂ ಆತನನ್ನು ಕರೆದೊಯ್ಯಲು ಯಾರೂ ಬರದಿದ್ದ ಕಾರಣ ಆತ ಐದು ವರ್ಷದ ಅವಧಿಯನ್ನು ಜೈಲಿನಲ್ಲಿಯೇ ಕಳೆದಿದ್ದ. ಇದೀಗ ಡಿ. 13 ರಂದು ನ್ಯಾಯಾಲಯ ಆತನಿಗೆ ಮತ್ತೇ ಜಾಮೀನು ನೀಡಿದೆ.
ಜತೆಗೆ ಆತನ ವಿಳಾಸವನ್ನು ಪತ್ತೆ ಮಾಡುವಂತೆ ಪೊಲೀಸರಿಗೆ ತಾಕೀತು ಮಾಡಿದ್ದು, ಆತನನ್ನು ಕುಟುಂಬದ ಜತೆಗೆ ಸೇರಿಸುವವರೆಗೆ ಜೈಲಿನಲ್ಲಿಡುವ ಬದಲು ಸರಕಾರದ ಆಶ್ರಯದಲ್ಲಿ ಇಡುವಂತೆ ಸೂಚಿಸಲಾಗಿದೆ. ಆರೋಪಿ ಮಾನಸಿಕ ಅಸ್ವಸ್ಥತೆ ಹೊಂದಿದ್ದು, ಕಾಳಜಿ ಕೇಂದ್ರದಲ್ಲಿ ಇರಿಸಿರುವ ಪೊಲೀಸರು, ಆತನ ವಿಳಾಸದ ಹುಡುಕಾಟದಲ್ಲಿ ತೊಡಗಿದ್ದಾರೆ.
ಆತನ ವಿರುದ್ಧ ದಾಖಲಾದ ಎಫ್ ಐಆರ್ ಮತ್ತು ಆರೋಪಪಟ್ಟಿಯಲ್ಲಿ ಪೊಲೀಸರು ಸುಳ್ಳು ವಿಳಾಸ ಕೊಟ್ಟಿದ್ದಾರೆ. ಇದೀಗ ಆ ವಿಳಾಸಕ್ಕೆ ತೆರಳಿ ವಿಚಾರಣೆ ನಡೆಸಿದರೆ, ಆ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ.ಹೀಗಾಗಿ, ಆ ಭಾಗದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದು, ಸತ್ತಾರ್ ಕುಟುಂಬದ ಪತ್ತೆಗೆ ಮುಂದಾಗಿದ್ದಾರೆ.