ಕಲಬುರಗಿ: ಪ್ರಿಯಾಂಕ್ ಖರ್ಗೆ ಆಪ್ತನ ಬೆದರಿಕೆಯಿಂದ ಗುತ್ತಿಗೆದಾರನೊಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗುತ್ತಿಗೆದಾರ ಸಚ್ಚಿನ್ ಎಂಬಾತ ಕಲಬುರಗಿಯ ರೈಲ್ವೆ ಟ್ರ್ಯಾಕ್ ಮೇಲೆ ಶವವಾಗಿ ಪತ್ತೆಯಾಗಿದ್ದು, ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕುಪನೂರ ಬೆದರಿಕೆ ಹಾಕಿದ್ದೇ ಆತ್ಮಹತ್ಯೆಗೆ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಬಿಜೆಪಿ ನಾಯಕರು ಇದನ್ನೇ ನೆಪವಾಗಿಟ್ಟುಕೊಂಡು ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ಆರಂಭಿಸಿದ್ದರು.
ಸಚಿವ ಪ್ರಿಯಾಂಕ್ ಖರ್ಗೆ ತಾವೇ ಖುದ್ದಾಗಿ ಸಾವಿನ ತನಿಖೆ ನಡೆಸುವುದಾಗಿ ಘೋಷಣೆ ಮಾಡಿದ್ದರು. ತಪ್ಪು ಯಾರೇ ಮಾಡಿದ್ದರೂ ತಪ್ಪು, ನನ್ನ ಬೆಂಬಲಿಗ ಆತ್ಮಹತ್ಯೆಗೆ ಕಾರಣವಾಗಿದ್ದರೆ ಆತನ ಮೇಲೆ ಕ್ರಮಕ್ಕೆ ಹಿಂಜರಿಯುವುದಿಲ್ಲ ಎಂದು ಘೋಷಣೆ ಮಾಡಿದ್ದರು.
ಆದರೆ, ಇದೀಗ, ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕುಪನೂರ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಸಚ್ಚಿನ್, ನನಗೆ ಸಿವಿಲ್ ಎಂಜಿನಿಯರ್ ಎಂದು ಪರಿಚಯ ಮಾಡಿಕೊಂಡು, ಜತೆಯಾಗಿ ಗುತ್ತಿಗೆ ಕೆಲಸ ಮಾಡೋಣ ಎಂದಿದ್ದರು. ಹೀಗಾಗಿ ಹಣವನ್ನು ಕೊಟ್ಡಿದ್ದೆ. ಆದರೆ, ಆ ಹಣವನ್ನು ವಾಪಸ್ ಕೊಡದೆ ಆತ ವಂಚಿಸುವ ಪ್ರಯತ್ನ ನಡೆಸಿದ್ದ ಎಂದು ಆರೋಪಿಸಿದ್ದಾರೆ.