ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದಿದ್ದ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಅಯ್ಯಪ್ಪ ಮಾಲಾಧಾರಿಗಳ ಪೈಕಿ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ೫ಕ್ಕೇರಿದೆ.
ಘಟನೆಯಲ್ಲಿ ೯ ಜನ ಮಾಲಾಧಾರಿಗಳು ಗಾಯಗೊಂಡಿದ್ದರು. ಸಂಪೂರ್ಣವಾಗಿ ಸುಟ್ಟು ಹೋಗಿದ್ದ ಮಾಲಾಧಾರಿಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಶೇ. ೬೦ಕ್ಕಿಂತ ಹೆಚ್ಚು ಸುಟ್ಟು ಹೋಗಿದ್ದ ಮಾಲಾಧಾರಿಗಳು ನಿಯಮಿತವಾಗಿ ಸಾವನ್ನಪ್ಪುತ್ತಿದ್ದಾರೆ.
ಕಳೆದ ಮೂರು ದಿನಗಳಿಂದೀಚೆಗೆ ಐವರು ಸಾವನ್ನಪ್ಪಿದ್ದು, ಉಳಿದ ನಾಲ್ವರು ಸಾವು ಬದುಕಿನ ಮಧ್ಯೆ ಸೆಣೆಸಾಟ ನಡೆಸುತ್ತಿದ್ದಾರೆ. ಕಿಮ್ಸ್ ಆಸ್ಪತ್ರೆಯ ವೈದ್ಯರು ಗಂಭೀರವಾಗಿ ಗಾಯಗೊಂಡಿರುವ ಮಾಲಾಧಾರಿಗಳ ಪ್ರಾಣ ಉಳಿಸುವ ಸಲುವಾಗಿ ಹರಸಾಹಸ ಪಡುತ್ತಿದ್ದಾರೆ.
ಡಿ.೨೨ ರಂದು ಹುಬ್ಬಳ್ಳಿಯ ಉಣಕಲ್ ಬಳಿ ಘಟನೆ ನಡೆದಿದ್ದು, ೯ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಮೊದಲಿಗೆ ಮೂವರು ಸಾವನ್ನಪ್ಪಿದ್ದು, ಮೃತರ ಕುಟುಂಬಕ್ಕೆ ಸರಕಾರ ತಲಾ ೫ ಲಕ್ಷ ರು. ಗಳ ಪರಿಹಾರ ಘೋಷಣೆ ಮಾಡಿತ್ತು. ಇದೀಗ ಮತ್ತೆರಡು ಮಾಲಾಧಾರಿಗಳು ಸಾವನ್ನಪ್ಪಿದ್ದಾರೆ.