ಬೆಳಗಾವಿ: ಮೈಕ್ರೋ ಫೈನಾನ್ಸ್ ವಂಚನೆ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಇದರ ವಿರುದ್ಧ ನಿಗಾ ಇಡುವಂತೆ ಒತ್ತಾಯ ಹೆಚ್ಚಾಗುತ್ತಿದೆ. ಈ ನಡುವೆ ಬೆಳಗಾವಿಯಲ್ಲಿನ ಮೈಕ್ರೋ ಫೈನಾನ್ಸ್ ಗಳ ಅಕ್ರಮ ತಡೆಗೆ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 40 ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸ್ವ-ಸಹಾಯ ಸಂಘಗಳ ಮೂಲಕ ಸುಮಾರು 15,000 ಜನರಿಗೆ ವಂಚನೆ ಮಾಡಿರುವುದು ಪತ್ತೆಯಾಗಿದೆ. ಇದರಲ್ಲಿ ಅಂದಾಜು 100 ಕೋಟಿ ರೂಪಾಯಿ ವಂಚನೆಯಾಗಿದೆ. ಹಗರಣದ ತನಿಖೆಗೆ ಮೂವರು ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿದ್ದು, ಈಗಾಗಲೇ ಕೆಲವು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಈ ಕುರಿತು ಬೆಳಗಾವಿ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 15 ಸಾವಿರ ಮಹಿಳೆಯರನ್ನು ಮೈಕ್ರೋಫೈನಾನ್ಸ್‌ನಲ್ಲಿ ಸಾಲ ಪಡೆದು ವಂಚಿಸಿದ್ದಾರೆ. ವಂಚನೆ ಕುರಿತು ಹಲವರು ದೂರಿದ್ದು, ಸಹಿ ಪಡೆದು ಸಾಲದ ಹಣ ನೀಡಿಲ್ಲ. ಸಹಾಯಧನ ನೀಡುವುದಾಗಿ ತಿಳಿಸಲಾಗಿದೆ ಎಂದರು.
ಈ ವಂಚನೆಯನ್ನು ಸುಮಾರು 40 ಮೈಕ್ರೋಫೈನಾನ್ಸ್ ಕಂಪನಿಗಳು ಎಸಗಿವೆ. 4-5 ಮಹಿಳೆಯರು ಈ ವಂಚನೆಯ ನೇತೃತ್ವ ವಹಿಸಿದ್ದರು ಎನ್ನಲಾಗಿದೆ. ಮಹಿಳೆಯರಿಗೆ ವಂಚಿಸಿದ ಮಧ್ಯವರ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು.
ಸಾಲ ವಸೂಲಾತಿ ಹೆಸರಿನಲ್ಲಿ ಮಹಿಳೆಯರಿಗೆ ಯಾವುದೇ ತೊಂದರೆ ನೀಡದಂತೆ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳ ತಂಡ ರಚಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ. ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.