ತುಮಕೂರು: ಟಾಟಾ ಏಸ್ ವಾಹನದಲ್ಲಿ ಜೈ ಭೀಮ್ ಹಾಡು ಹಾಕಿಕೊಂಡು ಹೋಗುತ್ತಿದ್ದರು ಎಂಬ ಕಾರಣಕ್ಕೆ ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗಿಡದಮುದ್ದೇನಹಳ್ಳಿ ನಡೆದಿದೆ.
ಸಿರಿಗೇರಿ ದೀಪು ಮತ್ತು ನರಸಿಂಹಮೂರ್ತಿ ಎಂಬುವವರು ತಮ್ಮ ಟಾಟಾ ಏಸ್ ವಾಹನದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಜೈ ಭೀಮ್ ಹಾಡನ್ನು ಹಾಕಿಕೊಂಡು ಹೋಗುತ್ತಿದ್ದರು. ಇದನ್ನು ರೈಲ್ವೆ ಪೊಲೀಸ್ ಚಂದ್ರಶೇಖರ ಹಾಗೂ ನರಸಿಂಹರಾಜು ಎಂಬುವವರು ಪ್ರಶ್ನೆ ಮಾಡಿದ್ದಾರೆ.
ಈ ನಡುವೆ ನಡೆದ ಮಾತಿನ ಚಕಮಕಿಯಲ್ಲಿ ಇಬ್ಬರ ಮೇಲೆ ಭೀಕರ ಹಲ್ಲೆ ನಡೆದಿದೆ. ದೀಪು ಎಂಬ 19 ವರ್ಷದ ಯುವಕನ ಮೇಲೆ ಹಲ್ಲೆ ನಡೆಸಿ, ಆತನ ಮರ್ಮಾಂಗಕ್ಕೆ ಥಳಿಸಲಾಗಿದೆ. ನರಸಿಂಹಮೂರ್ತಿ ಮೇಲೆಯೂ ಹಲ್ಲೆ ನಡೆದಿದ್ದು, ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪ್ರಕರಣದ ಸಂಬಂಧ ರೈಲ್ವೇ ಪೊಲೀಸ್ ಚಂದ್ರಶೇಖರ, ನರಸಿಂಹರಾಜು ಮೇಲೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ, ಹಲ್ಲೆ, ಕೊಲೆ ಪ್ರಯತ್ನದ ದೂರು ದಾಖಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.