ಕೊಪ್ಪಳ: ಚಾಕುವಿನಿಂದ ಇರಿದು ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಪ್ರಕರಣ ಕೊಪ್ಪಳ ನಗರದಲ್ಲಿ ನಡೆದಿದೆ.
ಕೊಲೆಯಾದವರನ್ನು ಗೀತಾ(೨೫) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ರಾಜೇಶ್ ಎಂಬುವವನೇ ಕೊಲೆ ಮಾಡಿರುವ ಆರೋಪಿ ಎನ್ನಲಾಗಿದೆ. ಈ ಇಬ್ಬರು ತುಮಕೂರು ಜಿಲ್ಲೆಯ ತುರುವೇಕರೆ ಮೂಲದವರು ಎಂದು ಹೇಳಲಾಗಿದೆ.
ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಪಾತ್ರೆ ಮಾರಾಟ ಮಾಡಲು ಬಂದಿದ್ದರು ಎನ್ನಲಾಗಿದ್ದು, ನಾಲ್ಕು ದಿನಗಳ ಹಿಂದೆ ಜಗಳವಾಡಿಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಪೊಲೀಸರು ಸಮಾಧಾನಪಡಿಸಿ ಕಳುಹಿಸಿದ್ದರು.
ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸುತ್ತ ಜಗಳ ಮಾಡುತ್ತಿದ್ದ ರಾಜೇಶ್ ಕೊನೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದ್ದು, ರಾಜೇಶ್ ನನ್ನು ವಶಕ್ಕೆ ಪಡೆದಿರುವ ಕೊಪ್ಪಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ನಡೆಸುತ್ತಿದ್ದಾರೆ.