ಸಿದ್ಧಾಪುರ: ಸಂಕ್ರಾಂತಿಯ ಪೂಜೆಯಲ್ಲಿ ತೊಡಗಿದ್ದ ಜನಸಂದಣಿಯ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಅಯ್ಯಪ್ಪ ದೇವಸ್ಥಾನದಲ್ಲಿ ಜನ ಸಂಕ್ರಾಂತಿಯ ಪೂಜೆಯ ಭಕ್ತಿಪರವಶತೆಯಲ್ಲಿ ತೊಡಗಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕಾರೊಂದು ಜನರ ಗುಂಪಿನ ಮೇಲರೆಗಿತು. ಈ ವೇಳೆ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಾತ್ರೆಯ ವೇಳೆ ನೂರಾರು ಮಂದಿ ಸೇರಿದ್ದರು. ಈ ವೇಳೆ ಇಕೋ ಸ್ಫೋರ್ಟ್ ವಾಹನದಲ್ಲಿ ಬಂದ ರೋಷನ್ ಫರ್ನಾಂಡೀಸ್ ಎಂಬ ವ್ಯಕ್ತಿ ಕುಡಿದ ಮತ್ತಿನಲ್ಲಿ ಏಕಾಏಕಿ ಕಾರನ್ನು ಜನರ ಗುಂಪಿನ ಮೇಲೆ ಹತ್ತಿಸಿದ. ಈ ವೇಳೆ ಮಹಿಳೆ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಚಾಲಕ ಕಾರು ಹತ್ತಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ವೇಳೆ ಉದ್ರಿಕ್ತ ಜನರ ಗುಂಪು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದೆ. ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ. ಆತ ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಗಾಯಗೊಂಡವರ ಪೈಕಿ ಕೆಲವರಿಗೆ ಸಿದ್ದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಗಂಭಿರವಾಗಿ ಗಾಯಗೊಂಡಿರುವ ಇಬ್ಬರು ಮಹಿಳೆಯರಿಗೆ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.