ಮತ್ತೇ ಉತ್ತರ ಭಾರತೀಯರ ಖ್ಯಾತೆ : ‘ಕನ್ನಡ’ ಪೊಲೀಸರಿಂದ ದೌರ್ಜನ್ಯದ ಆರೋಪ
ಬೆಂಗಳೂರು: ಕನ್ನಡ ಮಾತನಾಡುವಂತೆ ಒತ್ತಾಯಿಸದ ಪೊಲೀಸರು, ತಮ್ಮ ವಿರುದ್ಧ ದೌರ್ಜನ್ಯ ನಡೆಸಿದರು ಎಂದು ಉತ್ತರ ಭಾರತೀಯನೊಬ್ಬ ಮಾಡಿರುವ ಆರೋಪ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.
ವಸ್ತಾಲ್ ಸಾಂಘ್ವಿ ಎಂಬ ವ್ಯಕ್ತಿ ತನ್ನ ಎಕ್ಸ್ ಖಾತೆಯಲ್ಲಿ ತಾನು ತನ್ನ ಸ್ನೇಹಿತನ ಜತೆ ರಾತ್ರಿ 10.30ರಲ್ಲಿ ಹೊರಗೆ ಮಾತನಾಡಿಕೊಂಡಿದ್ದನ್ನು ಪೊಲೀಸರು ಪ್ರಶ್ನೆ ಮಾಡಿ, ನಂತರ ಕನ್ನಡದಲ್ಲಿ ಮಾತನಾಡುವಂತೆ ದೌರ್ಜನ್ಯ ಮಾಡಿದ್ದಾರೆ. ಕನ್ನಡದಲ್ಲಿಯೇ ಮಾತನಾಡಬೇಕು ಎಂಬ ಕಾನೂನು ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಟ್ವೀಟ್ ಅನ್ನು ಬೆಂಗಳೂರು ಪೊಲೀಸ್ ಗೆ ಕೂಡ ಟ್ಯಾಗ್ ಮಾಡಿದ್ದು, ಪೊಲೀಸರ ವರ್ತನೆಯ ವಿರುದ್ಧ ಆತ ಕಿಡಿಕಾರಿದ್ದಾನೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರದಲ್ಲಿ ಪ್ರತಿಯೊಬ್ಬರು ಅವರದೇ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದು, ಕೆಲವರು ಮೆಟ್ರೋ ಪಾಲಿಟಿನ್ ಸಿಟಿಗಳಲ್ಲಿ ಸ್ಥಳೀಯ ಕಲಿಯಬೇಕು ಎಂಬ ದೌರ್ಜನ್ಯ ಮಿತಿಮೀರುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಇಂತಹ ನಡೆ ಹೆಚ್ಚಾಗುತ್ತಿದೆ ಎಂದಿದ್ದಾರೆ. ಇದಕ್ಕೆ ಕೌಂಟರ್ ಎಂಬಂತೆ ಟ್ವೀಟ್ ಮಾಡಿರುವ ಮತ್ತೊಬ್ಬ ವ್ಯಕ್ತಿ, ನೀವು ನಿಂತಿರುವ ಜಾಗ ಸುರಕ್ಷವಲ್ಲ ಎಂಬ ಕಾರಣಕ್ಕೆ ಪೊಲೀಸರು ನಿಮಗೆ ಸಲಹೆ ನೀಡಿರಬಹುದು. ಜತೆಗೆ, ಏನಾದರೂ ಅನಾಹುತವಾದರೆ, ಇಡೀ ಪೊಲೀಸ್ ವ್ಯವಸ್ಥೆಯನ್ನು ದೂರುವುದು ಪ್ಯಾಷನ್ ಆಗಿದೆ. ಹೀಗಾಗಿ, ಅವರು ಸಲಹೆ ನೀಡಿದ್ದಾರೆ. ಅದರಲ್ಲಿ ಕನ್ನಡದಲ್ಲಿ ಮಾತನಾಡಿ ಎಂದದ್ದು ತಪ್ಪೇನಿಲ್ಲ. ಪ್ರತಿಯೊಬ್ಬ ವ್ಯಕ್ತಿ ಕನ್ನಡ ಕಲಿಯುವ ಪ್ರಯತ್ನ ಮಾಡುವುದು ಒಳ್ಳೆಯದು ಎಂದಿದ್ದಾರೆ.
ಅದೇ ರೀತಿ ಚನ್ನೈ ಅಥವಾ ದೆಹಲಿಯಲ್ಲಿ ನಿಂತು ತಮಿಳು ಅಥವಾ ಹಿಂದಿ ಏಕೆ ಮಾತನಾಡಬೇಕು ಎಂದು ಪೊಲೀಸರನ್ನು ಪ್ರಶ್ನೆ ಮಾಡಿದ್ದರೆ ಏನಾಗುತ್ತಿತ್ತು ಎಂಬ ಊಹೆ ನಿಮಗಿದೆಯೇ? ಇಲ್ಲಿದ್ದ ಮೇಲೆ ಇಲ್ಲಿನ ಭಾಷೆಯನ್ನು ಕಲಿಯುವ ಮತ್ತು ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಿ, ಅದನ್ನು ಬಿಟ್ಟು ಯಾವಾಗಲೂ ಬೆಂಗಳೂರಿನ ಹೆಸರು ಕೆಡಿಸುವ ಕೆಲಸ ಮಾಡಬೇಡಿ ಎಂದು ಮತ್ತೊಬ್ಬ ನೆಟ್ಟಿಗರು ಸಲಹೆ ನೀಡಿದ್ದಾರೆ.
ಈ ನಡುವೆ ಆ ವ್ಯಕ್ತಿಯ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೊಲೀಸ್ ಟ್ವೀಟರ್ ಹ್ಯಾಂಡ್ಲರ್, ನೀವು ನಿಂತಿದ್ದ ಜಾಗ ಮತ್ತು ಸಮಯದ ನಿಖರವಾದ ಮಾಹಿತಿಯನ್ನು ನೀಡಿ, ಹಾಗೆಯೇ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿ, ನಿಮಗಾದ ತೊಂದರೆಯನ್ನು ಪರಿಹರಿಸುವ ಪ್ರಯತ್ನ ಮಾಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಆ ವ್ಯಕ್ತಿಯಿಂದ ಯಾವುದೇ ಉತ್ತರ ಬಂದಿಲ್ಲ.


