ಬೆಂಗಳೂರು: ಪೊಲೀಸರ ಸೋಗಿನಲ್ಲಿ ಶ್ರೀಮಂತರಿಗೆ ಹನಿ ಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ಗ್ಯಾಂಗ್ ನ ಕಿಂಗ್ ಪಿನ್ ನಯಾನ ಎಂಬಾಕೆಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಯನಾ ಕೆಲ ದಿನಗಳಿಂದ ತಲೆಮರೆಸಿಕೊಂಡಿದ್ದು, ಆಕೆಯ ಹುಡುಕಾಟಕ್ಕಾಗಿ ತಂಡ ರಚನೆ ಮಾಡಿದ್ದರು. ಆ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ನಯನಾ ಬಂಧಿತಳಾಗಿದ್ದು, ಆಕೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ನಯನಾ ಕೆಲ ಶ್ರೀಮಂತರ ಪರಿಚಯ ಮಾಡಿಕೊಂಡು ಅವರ ಜತೆ ಸಲುಗೆಯಿಂದ ನಡೆದುಕೊಂಡು ನಂತರ ಅವರಿಂದ ಹಣಕ್ಕೆ ಬೇಡಿಕೆ ಇಡುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಗುತ್ತಿಗೆದಾರರೊಬ್ಬರು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಆರೋಪಿ ನಯನಾ ಗುತ್ತಿಗೆದಾರರಿಗೆ ತನ್ನ ಕಷ್ಟಗಳನ್ನು ಹೇಳಿಕೊಂಡಿದ್ದು, ಅವರಿಗೆ ಹತ್ತಿರವಾಗಿದ್ದಳು. ಕೆಲ ದಿನಗಳ ನಂತರ ಒಮ್ಮೆ ತನ್ನ ಮನೆಗೆ ಬರುವಂತೆ ಕೇಳಿಕೊಂಡ ಆಕೆ, ಆತ ಮನೆಗೆ ಬಂದಾಗ ತನ್ನ ಗ್ಯಾಂಗ್ ನ ಮೂವರನ್ನು ಪೊಲೀಸರ ಸೋಗಿನಲ್ಲಿ ಕರೆಸಿಕೊಂಡಿದ್ದಳು.
ಆಗ ಗುತ್ತಿಗೆದಾರನಿಗೆ ಬೆದರಿಸಿ, ಹಣ, ಚಿನ್ನಾಭರಣ ದೋಚಿದ್ದ ಗ್ಯಾಂಗ್ ಅಲ್ಲಿಂದ ಪರಾರಿಯಾಗಿತ್ತು. ದೂರು ನೀಡದಂತೆ ಬೆದರಿಕೆ ಹಾಕಿದ್ದರೂ, ಗುತ್ತಿಗೆದಾರರು ದೂರು ನೀಡಿದ್ದರು.
ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಬ್ಯಾಡರಹಳ್ಳಿ ಪೊಲೀಸರು, ಸಂತೋಷ್, ಅಜಯ್ ಹಾಗೂ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದರು. ಆದರೆ, ಪ್ರಕರಣದ ಕಿಂಗ್ ಪಿನ್ ನಯನಾ ತಲೆ ಮರೆಸಿಕೊಂಡಿದ್ದು, ಇದೀಗ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.