ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಂದ ಮತ್ತೊಂದು ಮಹತ್ವದ ಹೆಜ್ಜೆ
ಬೆಂಗಳೂರು: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬ್ಯಾಕ್ ಲಾಕ್ ಹುದ್ದೆಗಳಿಗೆ ಆಯ್ಕೆಯಾದ ಎಸ್‌ಸಿ, ಎಸ್ ಟಿ ಅಭ್ಯರ್ಥಿಗಳಿಗೆ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಆದೇಶ ಪತ್ರ ವಿತರಣೆ ಮಾಡಿದರು.
ಕರಾರಸಾ ನಿಗಮದ ಕೇಂದ್ರ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ನೇಮಕಾತಿ ಆದೇಶ ವಿತರಣೆ ಮಾಡಲಾಯಿತು. 2017ನೇ ಸಾಲಿನಲ್ಲಿ SC/ST ಮೀಸಲಾತಿಯ 36 ಹುದ್ದೆಗಳನ್ನು ಹಿಂಬಾಕಿ ಹುದ್ದೆಗಳೆಂದು ಗುರುತಿಸಲಾಗಿದ್ದು, ಅವುಗಳ ಪೈಕಿ 1 ಸಹಾಯಕ ಲೆಕ್ಕಿಗ, 8 ಕುಶಲಕರ್ಮಿ, 6 ಸಹಾಯಕ ಸಂಚಾರ ನಿರೀಕ್ಷಕ, 3 ತಾಂತ್ರಿಕ ಸಹಾಯಕ ಹಾಗೂ 7 ಕರಾಸಾ ಪೇದೆ ಹುದ್ದೆಗಳಿಗೆ ಒಟ್ಟು 25 ಅಭ್ಯರ್ಥಿಗಳು ಆಯ್ಕೆಗೊಂಡಿರುತ್ತಾರೆ. ಸದರಿ 26 ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ಮೂಲಕ ಕಾರ್ಯಸ್ಥಳ ನಿಯೋಜನೆ ಮಾಡಲಾಗಿದೆ.
2024ನೇ ಸಾಲಿನಲ್ಲಿ 1619 ಚಾಲಕ ಹಾಗೂ ಚಾಲಕ-ಕಂ-ನಿರ್ವಾಹಕರನ್ನು ನೇರ ನೇಮಕಾತಿ ಮೂಲಕ ಹಾಗೂ 100 ಮೃತರಾವಲಂಬಿತರನ್ನು ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಒಟ್ಟು 1745 ನೇಮಕಾತಿ ಕಳೆದ ಒಂದೂವರೆ ವರ್ಷದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ನಡೆದಿರುತ್ತದೆ.
ನಿಗಮದಲ್ಲಿ 1014 ಹೊಸ BS-6 ಮಾದರಿಯ ಬಸ್ ಗಳನ್ನು ಸೇರ್ಪಡೆಗೊಳಿಸಲಾಗಿದ್ದು, 123 ನಗರ ಸಾರಿಗೆ ಬಸ್ ಹಾಗೂ 56 ಪ್ರೀಮಿಯಂ ಬಸ್ ಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ.ರಾಚಪ್ಪ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.