ಬೆಂಗಳೂರು: ಸಿಎಂ ಎಚ್ಚರಿಕೆಯ ನಡುವೆಯೂ ಮೈಕ್ರೋ ಫೈನಾನ್ಸ್ ನವರ ಕಿರುಕುಳ ಹೆಚ್ಚಾಗಿದ್ದು, ಒಂದೇ ದಿನ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಶರಣಬಸವ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈತ ಮೈಕ್ರೋ ಫೈನಾನ್ಸ್ ಸಂಸ್ಥೆಯಿಂದ ಹತ್ತು ಲಕ್ಷ ಸಾಲ ಮಾಡಿದ್ದ. ಆದರೆ, ಸಂಸ್ಥೆಯವರು 15 ಲಕ್ಷ ಸಾಲ ಹೊರಿಸಿದ್ದರು.
ಈವರೆಗೆ ಐದು ಲಕ್ಷ ರು. ಹಣವನ್ನು ಮರುಪಾವತಿ ಮಾಡಿದ್ದರೂ, ಸಹ ಉಳಿಕೆ ಹಣವನ್ನು ಕಟ್ಟಲು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಯುವಕ, ಕೊನೆಗೆ ಅವರ ಕಾಟ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸಾಲ ಪಡೆದಿರುವ ಬಹುತೇಕ ಗ್ರಾಮಸ್ಥರು ಇಂತಹದ್ದೇ ಕಿರುಕುಳ ಅನುಭವಿಸುತ್ತಿದ್ದಾರೆ. ಒಂದೆರೆಡು ತಿಂಗಳು ಹಣ ಕಟ್ಟದೇ ಇದ್ದರೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಎಉತ್ತಿದ್ದಾರೆ. ಕಣ್ತಪ್ಪಿಸಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ.
ರಾಮನಗರದಲ್ಲಿ ಮಹಿಳೆ ಆತ್ಮಹತ್ಯೆ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ರಾಮನಗರ ತಾಲೂಕಿನ ತಿಮ್ಮಯ್ಯನ ದೊಡ್ಡಿಯಲ್ಲಿ ಯಶೋಧಮ್ಮ ಎಂಬ 60 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯಶೋಧಮ್ಮ ಏಳು ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ 4.5 ಲಕ್ಷ ರು. ಸಾಲ ಮಾಡಿದ್ದರು. ಅನಾರೋಗ್ಯದ ಕಾರಣದಿಂದ ಸಾಲ ಮರುಪಾವತಿ ಸಾಧ್ಯವಾಗಿರಲಿಲ್ಲ. ಹೀಗಾಗಿ, ಸಿಬ್ಬಂದಿ ಆಕೆಯ ಮನೆಗೆ ಬಂದು ಧಮಕಿ ಹಾಕಿದ್ದರು ಎನ್ನಲಾಗಿದೆ. ಸಾಲ ಕಟ್ಟಲು ಸಾಧ್ಯವಾಗದೆ ಇದ್ದರೆ ಎಲ್ಲಾದರೂ ಹೋಗಿ ಸಾಯಿ ಎಂದು ನಿಂದಿಸಿದ್ದರು.
ಇದರಿಂದ ಮನನೊಂದ ಯಶೋಧಮ್ಮ, ಮರುದಿನ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಪತಿ ನೀಡಿದ ದೂರಿನ ಅನ್ವಯ ಏಳು ಮೈಕ್ರೋ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿ ಮತ್ತು ಮ್ಯಾನೇಜರ್ ಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಗಳನ್ನು ಬಂಧಿಸಲು ಮುಂದಾಗಿದ್ದಾರೆ.