ಪಾವಗಡ: ಬಂಡೆ ಸ್ಫೋಟದ ವೇಳೆ ಕಾರ್ಮಿಕ ಸಾವು
ಪಾವಗಡ : ಬಂಡೆ ಸ್ಫೋಟದ ಸಂದರ್ಭದಲ್ಲಿ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದು, ಮತ್ತೊಬ್ಬ ಕಾರ್ಮಿಕ ಗಾಯಗೊಂಡಿರುವ ಘಟನೆ ಪಾವಗಡದಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ತಿರುಮಣಿ ವ್ಯಾಪ್ತಿಯಲ್ಲಿ ಸೋಲಾರ್ ಪಾರ್ಕ್ ನಿರ್ಮಿಸಲು ಗುರುತಿಸಿದ್ದ ಜಾಗದಲ್ಲಿ ಬಂಡೆ ಸ್ಫೋಟ ಮಾಡುವಾಗ ಘಟನೆ ನಡೆದಿದೆ. ಘಟನೆಯಲ್ಲಿ ರಾಯಚೂರು ಮೂಲದ ಬಸವರಾಜ್ ಎಂಬ 46 ವರ್ಷದ ಕಾರ್ಮಿಕ ಮೃತಪಟ್ಟಿದ್ದಾನೆ.
ಮತ್ತೊಬ್ಬ ಕಾರ್ಮಿಕ ಶಿವಯ್ಯ ಎಂಬುವವರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಕ್ರಮವಾಗಿ ಸ್ಫೋಟಕ ಬಳಸಿ ಸ್ಫೋಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸ್ಫೋಟದಿಂದ ಹೊತ್ತಿಕೊಂಡ ಬೆಂಕಿಯು ಬೆಟ್ಟಕ್ಕೆ ವ್ಯಾಪಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ. ಪ್ರಕರಣ ಸಂಬAಧ ತಿರುಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


