ಟ್ರೇಡ್ ಲೈಸೆನ್ಸ್ ನವೀಕರಣಕ್ಕೆ ಫೆ.28 ರ ಡೆಡ್ಲೈನ್
ಬೆಂಗಳೂರು: ರಾಜಧಾನಿ ಬೆಂಗಳೂರಿನ ಉದ್ದಿಮೆಗಳ ವ್ಯಾಪಾರ ಪರವಾನಗಿ ನವೀಕರಣ ಮಾಡಿಸಿಕೊಳ್ಳಲು ಫೆಬ್ರವರಿ 1 ರಿಂದ 28 ರವರೆಗೆ ಅವಕಾಶ ನೀಡಿ ಬಿಬಿಎಂಪಿ ಆದೇಶಿಸಿದೆ.
ಉದ್ದಿಮೆದಾರರ ಅನುಕೂಲಕ್ಕೆ ತಕ್ಕಂತೆ 1 ರಿಂದ 5 ವರ್ಷದವರೆಗೆ ವ್ಯಾಪಾರ ಪರವಾನಗಿ ನವೀಕರಣ ಮಾಡಿಸಿಕೊಳ್ಳಬಹುದು. ಅನುಮತಿ ಪಡೆಯುವ ವರ್ಷಕ್ಕೆ ಮಾತ್ರವೇ ಶುಲ್ಕ ವಿಧಿಸಲು ಅವಕಾಶ ನೀಡಲಾಗಿದೆ. ಆನ್ಲೈನ್ ಹಾಗೂ ಬ್ಯಾಂಕ್ ಚಾಲನ್ ಮೂಲಕ ಕೆನರಾ ಬ್ಯಾಂಕ್ನಲ್ಲಿ ಶುಲ್ಕ ಪಾವತಿ ಮಾಡಬೇಕಿದೆ.
ಫೆ. 28 ರೊಳಗೆ ನವೀಕರಣ ಮಾಡಿಕೊಳ್ಳಲು ಪಾವತಿ ಮಾಡಬೇಕಾದ ಶುಲ್ಕಕ್ಕೆ ಯಾವುದೇ ದಂಡ ವಿಧಿಸುವುದಿಲ್ಲ. ಆದರೆ, ಅನಂತರ ಮಾರ್ಚ್ 1 ರಿಂದ ನವೀಕರಣ ಮಾಡಿಸಲು ಶೇ. 25 ರಷ್ಟು ಹಾಗೂ ಏಪ್ರಿಲ್ 1 ರ ನಂತರ ನವೀಕರಣ ಮಾಡಿಸಲು ಶೇ.100 ದಂಡ ಪಾವತಿ ಮಾಡಬೇಕಿರುತ್ತದೆ.
ಈ ಸಂಬಂಧ ಎಲ್ಲ ವಲಯದ ಆರೋಗ್ಯಾಧಿಕಾರಿಗಳು ಉಪ ಆರೋಗ್ಯಾಧಿಕಾರಿಗಳು ಮತ್ತು ಆರೋಗ್ಯ ವೈದ್ಯಾಧಿಕಾರಿಗಳಿಗೆ ಸುತ್ತೋಲೆ ನೀಡಿರುವ ಬಿಬಿಎಂಪಿ ಮುಖ್ಯ ಆಯಕ್ತ ತುಷಾರ್ ಗಿರಿನಾಥ್, ಯಾವುದೇ ಗೊಂದಲವಿಲ್ಲದೆ ಸುತ್ತೋಲೆಯಲ್ಲಿರುವ ನಿಯಾಮವಳಿಗಳ ಪ್ರಕಾರ ಪರವಾನಗಿ ನವೀಕರಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


