ಬೆಂಗಳೂರು: ಮಾಜಿ ಸ್ಫೀಕರ್ ರಮೇಶ್ ಕುಮಾರ್ ವಿರುದ್ಧ ಕೇಳಿಬಂದಿರುವ ಅರಣ್ಯ ಭೂಮಿ ಒತ್ತುವರಿ ಆರೋಪಕ್ಕೆ ಸಂಬಂದಿಸಿದ ವರದಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹೈಕೋರ್ಟ್ ಗೆ ಸಲ್ಲಿಸಿದ್ದಾರೆ.
ಸ್ಫೀಕರ್ ರಮೇಶ್ ಕುಮಾರ್ ಕೋಲಾರ ಜಿಲ್ಲೆಯ ಶ್ರೀನಿವಾಸ ಪುರ ತಾಲೂಕಿನ ಹೊಸಹಡ್ಯ ಗ್ರಾಮದಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆರೋಪಕ್ಕೆ ಸಂಬಂಧಿಸಿದಂತೆ ಜಂಟಿ ಸರ್ವೆ ನಡೆಸಿ ವರದಿ ನೀಡುವಂತೆ ಹೈಕೋರ್ಟ್ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿತ್ತು.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಉಪಸ್ಥಿತಿಯಲ್ಲಿ ಜಂಟಿ ಸರ್ವೆ ಕಾರ್ಯ ನಡೆದಿದ್ದು, ಇದೀಗ ಅಧಿಕಾರಿಗಳು ಜಂಟಿ ಸರ್ವೆ ವರದಿಯನ್ನು ಹೈಕೋರ್ಟ್ ಮುಂದೆ ಸಲ್ಲಿಕೆ ಮಾಡಿದ್ದಾರೆ. ಸರ್ವೆಯಲ್ಲಿ ಒತ್ತುವರಿಯಾಗಿರುವ ಕುರಿತು ಉಲ್ಲೇಖವಾಗಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ಮು ಒತ್ತುವರಿ ಮಾಡಲಾಗಿದೆ. ಸರ್ವೆ ನಂಬರ್ 1 ರಲ್ಲಿ 4 ಎಕರೆ ಹಾಗೂ ಸರ್ವೆ ನಂಬರ್ 2 ರಲ್ಲಿ 54 ಎಕರೆ ಜಾಗದ ಒತ್ತುವರಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದೀಗ ಮಾಜಿ ಸ್ಫೀಕರ್ ಆಗಿರುವ ರಮೇಶ್ ಕುಮಾರ್ ಅವರಿಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ.