ಬೆಂಗಳೂರು, ಏಪ್ರಿಲ್ 25: ದೇಶದ 2024 ರ 2ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಬೆಳಗ್ಗೆ 7 ಗಂಟೆಗೆ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಇದಕ್ಕಾಗಿ ಚುನಾವಣಾ ಆಯೋಗ ಅಂತಿಮ ಹಂತದ ಸಿದ್ಧತೆ ಮುಗಿಸಿದ್ದು, 14 ಲೋಕಸಭಾ ಕ್ಷೇತ್ರಗಳಲ್ಲಿ ಮಸ್ಟರಿಂಗ್ ಮಾಡುತ್ತಿದೆ. ಬೆಂಗಳೂರಿನ ಸೆಂಟ್ ಜೋಸೆಫ್ ಹೈಸ್ಕೂಲ್ನ ಮಸ್ಟರಿಂಗ್ ಸೆಂಟರ್ನಲ್ಲಿ ಮತಯಯಂತ್ರ ವಿತರಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಒಟ್ಟು 8 ಸಾವಿರದ 984 ಮತಗಟ್ಟೆಗಳಿದ್ದು, ಸಿಬ್ಬಂದಿ ಇಂದು ಸಂಜೆಯೇ ಮತಗಟ್ಟೆ ತಲುಪಲಿದ್ದಾರೆ. ಮತಯಂತ್ರ ಸ್ವೀಕರಿಸುವ ವೇಳೆ ಮಸ್ಟರಿಂಗ್ ಕೇಂದ್ರದಲ್ಲೇ ಸಿಬ್ಬಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮಲ್ಲೇಶ್ವರಂನ ಪದವಿಪೂರ್ವ ಕಾಲೇಜಿನಲ್ಲೂ ಸ್ಟ್ರಾಂಗ್ ರೂಮ್ ತೆರೆದು ಸಿಬ್ಬಂದಿಗೆ ಇವಿಎಂ ಹಂಚಿಕೆ ಮಾಡಲಾಗಿದೆ. ಇವಿಎಂ ವಿವಿಪ್ಯಾಟ್, ವೋಟರ್ ಲಿಸ್ಟ್, ಶಾಯಿ ವಿತರಿಸಲಾಗಿದೆ.
ಬೆಂಗಳೂರಿನಲ್ಲಿ ಭದ್ರತೆಗೆ 13 ಸಾವಿರ ಪೊಲೀಸರು
ನಾಳೆ ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಮತದಾನ ನಡೆಯಲಿದ್ದು. ಎಲ್ಲಾ ಕ್ಷೇತ್ರದಲ್ಲೂ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇನ್ನೂ ಬೆಂಗಳೂರಿನಲ್ಲಿ 13 ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆ ನಿಯೋಜಿಸಲಾಗಿದೆ.
14 ಕ್ಷೇತ್ರಗಳಲ್ಲಿ ಮತಹಬ್ಬ
ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದ್ದು, 14 ಕ್ಷೇತ್ರಗಳಲ್ಲಿ ಒಟ್ಟು ಮತದಾರರ ಸಂಖ್ಯೆ 2,88,19,342 ಇದೆ. ಈ ಪೈಕಿ 1,44,17,530 ಪುರುಷ ಮತದಾರರು, 1,43,87,585 ಮಹಿಳಾ ಮತದಾರರು ಇದ್ದಾರೆ.
ಯಾವೆಲ್ಲ ದಾಖಲೆ ತೋರಿಸಿ ಮತ ಚಲಾಯಿಸಬಹುದು?
ಮತಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ, ಮತದಾನದ ವೇಳೆ ವೇಳೆ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮನ್ರೆಗಾ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಡ್ರೈವಿಂಗ್ ಲೈಸೆನ್ಸ್ ತೋರಿಸಿ ಹಕ್ಕು ಚಲಾಯಿಸಬಹುದು. 30 ಸಾವಿರದ 600 ಮತಗಟ್ಟೆಗಳ ಪೈಕಿ 19,701 ಮತಗಟ್ಟೆಗಳಲ್ಲಿ ಲೈವ್ವೆಬ್ಕಾಸ್ಟ್ ಇರಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮನೆ ಮನೆ ಪ್ರಚಾರ: ಅಭ್ಯರ್ಥಿಗಳಿಂದ ಕೊನೆ ಹಂತದ ಕಸರತ್ತು
ಬುಧವಾರ ಸಂಜೆಯೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಮಾಡುತ್ತಿದ್ದಾರೆ. ಮತದಾರರನ್ನ ಒಲೈಸಿಕೊಳ್ಳಲು ತೆರೆಮರೆ ತಂತ್ರಗಾರಿಕೆ ಮಾಡ್ತಿದ್ದಾರೆ. ಶುಕ್ರವಾರ ಕರ್ನಾಟಕವೂ ಸೇರಿ ಒಟ್ಟು 13 ರಾಜ್ಯಗಳ 89 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, 1,206 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕರ್ನಾಟಕದ 14 ಕ್ಷೇತ್ರಗಳಲ್ಲಿ 247 ಅಭ್ಯರ್ಥಿಗಳ ಭವಿಷ್ಯ ನಾಳೆ ಮತಯಂತ್ರದಲ್ಲಿ ಭದ್ರವಾಗಲಿದೆ.
14 ಕ್ಷೇತ್ರದಲ್ಲಿ 247 ಅಭ್ಯರ್ಥಿಗಳು ಕಣದಲ್ಲಿ…
14 ಕ್ಷೇತ್ರಗಳಲ್ಲಿ 247 ಅಭ್ಯರ್ಥಿಗಳ ಪೈಕಿ 226 ಪುರುಷ ಅಭ್ಯರ್ಥಿಗಳು, 21 ಮಹಿಳಾ ಅಭ್ಯರ್ಥಿಗಳು, 118 ಪಕ್ಷೇತರ ಅಭ್ಯರ್ಥಿಗಳು ಇದ್ದಾರೆ. ಇದರಲ್ಲಿ ಬಿಜೆಪಿಯ 11, ಜೆಡಿಎಸ್ನ 3 ಕಾಂಗ್ರೆಸ್ನ 14 ಅಭ್ಯರ್ಥಿಗಳಿದ್ದಾರೆ. ಬಿಎಸ್ಪಿ 12 ಅಭ್ಯರ್ಥಿಗಳು, ಸಿಪಿಐಎಂ ಪಕ್ಷದ ಒಬ್ಬರು, ಇತರೆ ಪಕ್ಷ ಮತ್ತು ಪಕ್ಷೇತರರೂ ಸೇರಿ 89 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಚುನಾವಣಾ ಕಾರ್ಯಕ್ಕಾಗಿ ಆಯೋಗ 3800 ಬಸ್ಗಳನ್ನ ಬಳಕೆ ಮಾಡಿಕೊಳ್ತಿದೆ. ಇದರಲ್ಲಿ 2,100 ಕೆಎಸ್ಆರ್ಟಿಸಿ ಬಸ್, 1700 ಬಿಎಂಟಿಸಿ ಜೊತೆಗೆ ಖಾಸಗಿ ಬಸ್ ಮತ್ತು ಶಾಲಾ ವಾಹನಗಳನ್ನ ಬಳಸಿಕೊಳ್ಳಲಾಗುತ್ತಿದೆ.