ಯತ್ನಾಳ್ ಗುದ್ದಾಟದ ಹಿಂದೆ ಹೈಕಮಾಂಡ್‌ನದ್ದೇ ತೆರೆಮರೆಯ ಆಟ
BSY ಕುಟುಂಬವನ್ನು ಸಮಯ ನೋಡಿ ಮರೆಗೆ ಸರಿಸುವ ಪ್ರಯತ್ನವೇ?
ವೈಟ್ ಪೇಪರ್ ಸ್ಪೆಷಲ್
ಬೆಂಗಳೂರು: ಯಡಿಯೂರಪ್ಪನ್ ಬಿಟ್ಟು ಪಕ್ಷ ಕಟ್ಟೋಕೆ ನಮ್ಗೆ ಬರುತ್ತೆ,,,, ಅಪ್ಪ ಮಕ್ಕಳನ್ನು ಪಕ್ಷದಿಂದ ದೂರ ಇಟ್ಟು ಬಿಜೆಪಿ ಕಟ್ತೇವೆ…ಯತ್ನಾಳ್ ಹೀಗಂದಿದ್ದೇಕೆ?
ಯತ್ನಾಳ್ ಟಾರ್ಗೆಟ್ ವಿಜಯೇಂದ್ರ ಮಾತ್ರವೇ ಆಗಿದ್ದರೂ,. ಇಂತಹದ್ದೊAದು ಡೈಲಾಗ್ ನಿಜವಾಗ್ಲು ರ‍್ತಿತ್ತಾ? ಅದರಲ್ಲೂ ಇದು ಯತ್ನಾಳ್ ಮನಸ್ಸಿನ ಮಾತಷ್ಟೇ ಆಗಿದ್ದರೇ, ಇಷ್ಟೊಂದು ಧೈರ್ಯದಲ್ಲಿ ಅವರು ಪಕ್ಷ ಕಟ್ಟುವ ಮಾತನ್ನಾಡ್ತಾ ಇದ್ರಾ? ಇದೆಲ್ಲ ಅನುಮಾನ ಬಿಜೆಪಿ ಪಡಸಾಲೆಯಲ್ಲಿ ಕೇಳುತ್ತಿದೆ.
ಯತ್ನಾಳ್ ಒಬ್ಬರೇ ಆಡುತ್ತಿದ್ದ ಮಾತುಗಳಿಗೆ ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹ, ಸಿ.ಟಿ.ರವಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ ಹೀಗೆ ಸರಣಿ ಸೇರ್ಪಡೆ ಆಗ್ತಾನೆ ಇದೆ. ಅಷ್ಟಕ್ಕೂ ಈ ಎಲ್ಲ ನಾಯಕರಿಗೆ ಹೈಕಮಾಂಡ್ ಆಯ್ಕೆ ಮಾಡಿರುವ ರಾಜ್ಯಾಧ್ಯಕ್ಷನ ವಿರುದ್ಧವೇ ಸಿಡಿದೇಳುವ ಸಿಟ್ಟು ತರಿಸುತ್ತಿರುವ ಕಾಣದ ಕೈ ಯಾವುದು?
ಈ ಎಲ್ಲ ನಾಯಕರು ಪಕ್ಷದ ಅಧ್ಯಕ್ಷನ ವಿರುದ್ಧ ಮಾತನ್ನಾಡುತ್ತಿದ್ದರೂ ಹೈಕಮಾಂಡ್ ಸೈಲೆಂಟ್ ಆಗಿದೆ. ಶಿಸ್ತು ಸಮಿತಿಯೂ ಯತ್ನಾಳ್ ಬಿಟ್ಟು ಮತ್ಯಾರಿಗೂ ನೊಟೀಸ್ ನೀಡಲು ಹೋಗಿಲ್ಲ. ಹಾಗದರೆ, ಈ ಅತೃಪ್ತ ನಾಯಕರ ಅಸಮಾಧಾನಕ್ಕೆ ಹೈಕಮಾಂಡ್ ನೀರೆರೆಯುತ್ತಿದೆಯಾ?
ಹೌದು ಎನ್ನುತ್ತಿವೆ ಬಿಜೆಪಿಯ ಬಲ್ಲ ಮೂಲಗಳು….ಕಾಂಗ್ರೆಸ್-ಜಡಿಎಸ್ ಮೈತ್ರಿ ಸರಕಾರ ಬೀಳಿಸಿ ಅಧಿಕಾರ ಪಡೆಯುವಾಗಲೇ ಹೈಕಮಾಂಡ್‌ಗೆ ಯಡಿಯೂರಪ್ಪ ಮೇಲೆ ಅಸಮಾಧಾನವಾಗಿತ್ತು. ಆದರೆ, ಹಠಕ್ಕೆ ಬಿದ್ದು ಸರಕಾರ ಬೀಳಿಸಿ, ಅಧಿಕಾರದ ಗದ್ದುಗೆ ಏರಿಯೇ ಬಿಟ್ಟಿದ್ದರು ಬಿಎಸ್‌ವೈ.
ಈ ಕಾರಣಕ್ಕೆ ಯತ್ನಾಳ್ ಯಡಿಯೂರಪ್ಪ ಸಿಎಂ ಆಗಿದ್ದಾಗಿನಿಂದಲೇ ಗುಡುಗುವ ತಮ್ಮ ವರಸೆ ಆರಂಭಿಸಿದ್ದರು. ಆದರೆ, ಹೈಕಮಾಂಡ್‌ಗೆ ಮುಂಬರುವ ಚುನಾವಣೆಯಲ್ಲಿ ಯಡಿಯೂರಪ್ಪ ಹಿಂದಿರುವ ಲಿಂಗಾಯತ ಶಕ್ತಿಯನ್ನು ಎದುರು ಹಾಕಿಕೊಳ್ಳುವ ಧೈರ್ಯವಿರಲಿಲ್ಲ. ಹೀಗಾಗಿ, ಸೈಲೆಂಟ್ ಆಗಿಯೇ ಸರ್ವವನ್ನು ವೀಕ್ಷಣೆ ಮಾಡುತ್ತಿತ್ತು.
ಒಂದು ಹಂತದಲ್ಲಿ ವಯಸ್ಸಿನ ಕಾರಣ ನೀಡಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ತಮ್ಮ ಅಭ್ಯರ್ಥಿಯನ್ನು ಸಿಎಂ ಮಾಡಲು ಹೈಕಮಾಂಡ್ ಅಣಿಯಾಗಿತ್ತು. ಆದರೆ, ಹಠಕ್ಕೆ ಬಿದ್ದ ಬಿಎಸ್‌ವೈ, ತಮ್ಮದೇ ಬಣದ ಬೊಮ್ಮಾಯಿಯನ್ನೇ ಸಿಎಂ ಮಾಡಿಸುವಲ್ಲಿ ಗೆದ್ದರು. ಹೈಕಮಾಂಡ್ ಮತ್ತು ಅದರ ಹಿಂದಿರುವ ಶಕ್ತಿಗಳು ಮತ್ತೊಮ್ಮೆ ಬಿದ್ದವು.
ಆದರೆ, ಅಷ್ಟಕ್ಕೆ ಸುಮ್ಮನಾಗುವುದು ಬಿಜೆಪಿ ಹೈಕಮಾಂಡ್‌ನ ಸಿದ್ಧಾಂತವಲ್ಲ. ಹೀಗಾಗಿ, ಮುಂಬರುವ ದಿನಗಳಲ್ಲಿ ಯಡಿಯೂರಪ್ಪ ಜತೆಯಾಗಿದ್ದುಕೊಂಡೇ, ಬೊಮ್ಮಾಯಿ ಸಿಎಂ ಆಗಿದ್ದಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ.ಟಿ.ರವಿಯನ್ನು ಕೂರಿಸುವ ಪ್ರಯತ್ನ ನಡೆಸಿತ್ತು. ಆದರೆ, ಅದಕ್ಕೂ ಅಡ್ಡಗಾಲು ಹಾಕಿದ್ದ ಯಡಿಯೂರಪ್ಪ ತಮ್ಮ ಮಗನಿಗೆ ಪಟ್ಟ ಕಟ್ಟಿಸುವಲ್ಲಿ ಯತ್ನಿಸಿದರು.
ಇಲ್ಲಿಯೂ ಬಿಎಸ್‌ವೈ ಗೆದ್ದಿದ್ದರೂ ಹೈಕಮಾಂಡ್ ನಾಯಕರು ಮತ್ತು ಅವರ ಹಿಂಬಾಲಕರ ಕಣ್ಣು ಉರಿಸಿತು. ಆದರೆ, ಯಡಿಯೂರಪ್ಪ ತಮ್ಮನ್ನು ಎದುರು ಹಾಕಿಕೊಂಡರೆ ಕಾಂಗ್ರೆಸ್ ಕಡೆಗೆ ತಮ್ಮವರನ್ನೆಲ್ಲ ಕಳಿಹಿಸಿಕೊಡುವ ತಯಾರಿ ನಡೆಸಿದ್ದರು. ಇದರ ಭಾಗವಾಗಿ ರೇಣುಕಾಚಾರ್ಯ ಸೇರಿ ಕೆಲವು ಹಿಂಬಾಲಕರು ಕಾಂಗ್ರೆಸ್ ಬಾಗಿಲು ಬಡಿದು ವಾಪಸ್ ಆಗಿದ್ದರು.
ಆದರೆ, ಯತ್ನಾಳ್ ಯಡಿಯೂರಪ್ಪ ಮತ್ತು ವಿಜಯೇಂದ್ರ ಪಾಲಿಗೆ ಹೆಗಲೇರಿಕೊಂಡೇ ಬಂದಿದ್ದರು. ಇದೀಗ ವಿಕೋಪಕ್ಕೆ ಹೋಗಿದ್ದು, ಅವರಿಗೆ ಮತ್ತೊಂದಿಷ್ಟು ನಾಯಕರು ಸಾಥ್ ನೀಡುತ್ತಿದ್ದಾರೆ. ಅವರಿಗೆಲ್ಲ ಹೈಕಮಾಂಡ್ ಅಭಯವಿದೆ ಎಂಬುದು ಅವರೆಲ್ಲರ ಮಾತಿನ ಶೈಲಿಯಲ್ಲಿಯೇ ಗೊತ್ತಾಗುತ್ತಿದೆ.
ಮೊನ್ನೆಮೊನ್ನೆಯಷ್ಟೇ ಬಿಜೆಪಿಗೆ ಬಂದ ರಮೇಶ್ ಜಾರಕಿಹೊಳಿ ಆ ಪಕ್ಷದ ರಾಜ್ಯಾಧ್ಯಕ್ಷನನ್ನು ನೀನು ಬಚ್ಚಾ ಎಂದು ಹೇಳುವುದು ಅಷ್ಟು ಸುಲಭವಲ್ಲ. ಅದೇ ವಾರಗೆಯ ಸುಧಾಕರ್ ಯುದ್ಧ ಸಾರುವುದು ಅಷ್ಟೊಂದು ಸುಲಭವಲ್ಲ. ಯಡಿಯೂರಪ್ಪನಿಲ್ಲದೆ ಬಿಜೆಪಿ ಕಟ್ಟುತ್ತೇವೆ ಎಂಬ ಕಾನ್ಫಿಡೆನ್ಸ್ ಹೈಕಮಾಂಡ್‌ಗೆ ಬಂದ ಮೇಲೆಯೇ ಇಷ್ಟೆಲ್ಲ ನಡೆಯುತ್ತಿದೆ.
ಈಗ ಬಿಎಸ್‌ವೈ ಬಹುತೇಕ ಹೈರಾಣಾಗಿದ್ದಾರೆ. ವಿಜಯೇಂದ್ರ ಅಂದುಕೊAಡಷ್ಟು ಸಮರ್ಥನಲ್ಲ ಎಂಬ ಸತ್ಯ ಹೈಕಮಾಂಡ್‌ಗೂ ಮನವರಿಕೆಯಾಗಿದೆ. ಈ ಇಬ್ಬರು ಮುನಿದರೆ, ಹಿಂದಿನಷ್ಟು ಪ್ರಮಾಣದಲ್ಲಿ ಶಾಸಕರು, ನಾಯಕರು ಹಿಂಬಾಲಿಸುವುದಿಲ್ಲ ಎಂಬ ನಂಬಿಕೆ ಹೈಕಮಾಂಡ್‌ಗೆ ಬಂದಿದೆ. ಹೀಗಾಗಿಯೇ ಶುರುವಾಗಿದೆ ಈ ವರಸೆ.
ವಿಜಯೇಂದ್ರ ನೇತೃತ್ವದ ಬಿಜೆಪಿ, ಸಿದ್ದರಾಮಯ್ಯ ಮೂಡ ಹಗರಣದಲ್ಲಿ ರಾಜೀನಾಮೆ ನೀಡಿದರೆ, ದಲಿತ ಸಿಎಂ ಕೂಗು ಕಾಂಗ್ರೆಸ್‌ನೊಳಗೆ ಗದ್ದಲವಾದರೆ, ಡಿಕೆಶಿ ಸಿಡಿದೆದ್ದು ಕಾಂಗ್ರೆಸ್ ಹೋಳಾದರೆ ಎಂಬ ಊಹೆಯಲ್ಲಿ ತೇಲುತ್ತಿದ್ದರೆ, ಬಿಜೆಪಿ ಹೈಕಮಾಂಡ್, ಬಹುಮತದ ಸರಕಾರ ಬೀಳಿಸಿ ಸರಕಾರ ರಚಿಸುವ ಕನಸು ಕಾಣದೆ, ತಮ್ಮ ಮಾತು ಕೇಳದ ನಾಯಕರ ನಾಯಕತ್ವವಿಲ್ಲದೆ ಪಕ್ಷ ಹಣಿಗೊಳಿಸುವ ತಯಾರಿಯಲ್ಲಿ ತೊಡಗಿದೆ.
ಇದಕ್ಕಾಗಿಯೇ ಯತ್ನಾಳ್ ಕೈಯಲ್ಲಿ ಯಡಿಯೂರಪ್ಪ ಇಲ್ಲದೆ ಪಕ್ಷ ಕಟ್ಟಲು ಸಾಧ್ಯ ಎನ್ನಿಸುತ್ತಿದೆ. `ಸುಧಾಕರ್ ಬಾಯಿಂದ ಯುದ್ಧ ಸಾರುವ ಮಾತುಗಳನ್ನಾಡಿಸುತ್ತಿದೆ. ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿ ಮುಂದೆ ವಿಜಯೇಂದ್ರ ಬಚ್ಚಾ ಆಗ್ತಾ ಇದ್ದಾರೆ. ಇದೆಲ್ಲವೂ ಬಂಡಾಯ ನಾಯಕರ ಆಟ ಎಂದುಕೊAಡು ರಾಜ್ಯದ ಜನತೆ ಸೈಲೆಂಟ್ ಆಗಿದ್ದರೆ, ಇದು ಹೈಕಮಾಂಡ್‌ನ ತಂತ್ರಗಾರಿಕೆ ಎನ್ನುತ್ತಿವೆ ರಾಜಕೀಯ ಪಂಡಿತರ ಲೆಕ್ಕಾಚಾರಗಳು !