ಅಪರಾಧ ಸುದ್ದಿ

ಜಾಹೀರಾತು ಫಲಕ ಪ್ರದರ್ಶನಕ್ಕೆ ಅಡ್ಡಿ: ಏಜೆನ್ಸಿಯಿಂದ 552 ಮರಗಳ ಮಾರಣಹೋಮ

Share It

ಬೆಂಗಳೂರು: ಜಾಹೀರಾತು ಪ್ರದರ್ಶನಕ್ಕೆ ಅಡ್ಡಿಯಾಗುತ್ತವೆ ಎಂಬ ಕಾರಣಕ್ಕೆ ಜಾಹೀರಾತು ಸಂಸ್ಥೆಯ ಮಾಲೀಕನೊಬ್ಬ 552 ಮರಗಳ ಮಾರಣಹೋಮ ನಡೆಸಿರುವ ಘಟನೆ ನಾಗಪುರ್ ನಗರದಲ್ಲಿ ನಡೆದಿದೆ.

ಜಾಹೀರಾತು ಏಜೆನ್ಸಿಯ ಮಾಲೀಕ ವಿಶ್ವಜೀತ್ ವೈರಗಡೆ, ಕರಣ್ ನೈತಮ್ ರಾಜಾ ನೈತಮ್, ಸಾಹಿಲ್ ಉಯಿಕೆ, ಅಜಯ್ ನೈತಮ್ ಮತ್ತು ಶಿವನೈತಮ್ ಎಂಬ ಆರು ಜನರ ಮೇಲೆ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಛತ್ರಪತಿ ಸಂಭಾಜಿ ವೃತ್ತ ಮತ್ತು ಖಮ್ಲಾ ವೃತ್ತ ನಡುವಿನ ರಿಂಗ್ ರಸ್ತೆಯುದ್ದಕ್ಕೂ ಹಸಿರಿನಿಂದ ಕಂಗೊಳಿಸುತ್ತಿದ್ದ ಮರಗಿಡಗಳ ಮೇಲೆ ಈ ಕಿಡಿಗೇಡಿಗಳ ಕಣ್ಣುಬಿದ್ದಿದ್ದು, ರಾತ್ರೋರಾತ್ರಿ ಅದೆಲ್ಲವನ್ನೂ ಕಡಿದು ಬಿಸಾಡಿದ್ದಾರೆ.

ತಮ್ಮ ಏಜೆನ್ಸಿ ಅಳವಡಿಸಲು ತೀರ್ಮಾನಿಸಿದ್ದ ಜಾಹೀರಾತು ಫಲಕಗಳು ಮತ್ತು ಜಾಹೀರಾತು ಪ್ರದರ್ಶನದ ಕಂಬಗಳನ್ನು ಅಳವಡಿಸಲು ಅಡ್ಡಿಯಾಗಿದ್ದವು ಎಂಬ ಕಾರಣಕ್ಕೆ ಮರ ಕತ್ತರಿಸಿದ್ದು, ಇದರಿಂದ ಸರಕಾರಕ್ಕೆ 56 ಲಕ್ಷ ರು.ಗಳಷ್ಟು ನಷ್ಟವಾಗಿದೆ ಎಂದು ವರದಿಯಾಗಿದೆ.

152 ಬಿಸ್ಮಾರ್ಕ್ ತಾಳೆ ಮರಗಳು ಮತ್ತು 410 ಅಶೋಕ ಮರಗಳು ಸೇರಿ 552 ಮರಗಳು ನಾಶವಾಗಿವೆ. ಈ ಮರಗಳನ್ನು ಲೋಕೋಪಯೋಗಿ ಇಲಾಖೆ ರಿಂಗ್ ರಸ್ತೆಯ ರಸ್ತೆ ವಿಭಜಕದಲ್ಲಿ ನೆಟ್ಟು ಕಳೆದ ನಾಲ್ಕು ವರ್ಷದಿಂದ ನಿರ್ವಹಣೆ ಮಾಡಿಕೊಂಡು ಬಂದಿತ್ತು.

ಈ ಘಟನೆ ಸಂಬಂಧ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಮರಗಳ ಮಾರಣಹೋಮ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿ ಮರಕಡಿದವರನ್ನು ಪತ್ತೆಹಚ್ಚಿದ್ದಾರೆ. ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿದಾಗ, ತಮ್ಮ ಮಾಲೀಕನ ಮಾತಿನಂತೆ ಮರ ಕತ್ತರಿಸಿರುವುದಾಗಿ ಹೇಳಿದ್ದಾರೆ. ಹೀಗಾಗಿ, ಏಜೆನ್ಸಿಯ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.


Share It

You cannot copy content of this page