ಬೆಂಗಳೂರು: ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆಲ್ಲ ನಾನೇ ಕಾರಣಕರ್ತ ಎಂದು ಮಾಜಿ ಶಾಸಕರು ಬೀಗುತ್ತಿದ್ದರೆ, ಬೀಗುವುದನ್ನೇ ಬದುಕು ಮಾಡಿಕೊಂಡಿದ್ದಾರೆ ಎಂದು ಹಾಲಿ ಶಾಸಕರು ಅವರ ಕಾಲೆಳೆದಿದ್ದಾರೆ.
ನಗರದ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಇಂತಹ ಕಿತ್ತಾಟ ಇದೀಗ ಎಲ್ಲೆ ಮೀರಿದೆ. ಕಳೆದ ಒಂದು ತಿಂಗಳಿಂದ ಶಾಸಕ ಎಸ್. ಮುನಿರಾಜು ಅನೇಕ ಕಾಮಗಾರಿಗಳನ್ನು ಶಂಕುಸ್ಥಾಪನೆ, ಉದ್ಘಾಟನೆ ಮಾಡುತ್ತಿದ್ದಾರೆ. ಇದು ಮಾಜಿ ಶಾಸಕ ಆರ್.ಮಂಜುನಾಥ್ ಕಣ್ಣು ಕೆಂಪಾಗಿಸಿದೆ. ಹೀಗಾಗಿ, ಮಂಜುನಾಥ್, ಮುನಿರಾಜು ನಾನು ತಂದ ಅನುದಾನದಲ್ಲಿ ಅಭಿವೃದ್ಧಿ ಮಾಡುವ ನಾಟಕ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಮಾಜಿ ಶಾಸಕರ ನಡೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಎಸ್.ಮುನಿರಾಜು, ನಾನು ಅನುದಾನ ತಂದೆ ಹೇಳಿಕೊಂಡು ಓಡಾಡುವುದಷ್ಟೇ ಮಾಜಿ ಶಾಸಕರ ಕೆಲಸವಾಗಿದೆ. ಅನುದಾನ ತಂದವರಿಗೆ ಅಧಿಕಾರ ಇದ್ದಾಗ ಕೆಲಸ ಮಾಡಲು ಯಾಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಮುನಿರಾಜು ಅವರ ಹೇಳಿಕೆಗೆ ಗರಂ ಆಗುವ ಮೂಲಕ ಏಕವಚನದಲ್ಲಿಯೇ ಕಿಡಿಕಾರಿರುವ ಮಾಜಿ ಶಾಸಕ ಮಂಜುನಾಥ್, ಆತನಿಗೆ ನನ್ನ ಜಪ ಮಾಡುವುದಷ್ಟೇ ಗೊತ್ತು. ಅಭಿವೃದ್ಧಿ ಮಾಡಿ ಆತನಿಗೆ ಗೊತ್ತಿಲ್ಲ. ಅದ್ಯಾವ ಮುಖ ಹೊತ್ತುಕೊಂಡು ಕಾಮಗಾರಿ ಉದ್ಘಾಟನೆ ಮಾಡೋಕೆ ಹೋಗ್ತಾನೋ’ ಎಂದು ಬೆಂಡೆತ್ತಿದ್ದಾರೆ.
ಈ ಮಾಜಿ ಮತ್ತು ಹಾಲಿಗಳ ಕಿತ್ತಾಟದ ನಡುವೆ ದಾಸರಹಳ್ಳಿ ಕ್ಷೇತ್ರದ ಜನತೆ ಹೈರಾಣಾಗಿದ್ದಾರೆ. ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿವೆ. ಕುಡಿಯುವ ನೀರಿನ ಐದನೇ ಹಂತದ ಜಾರಿ ಮರೀಚಿಕೆಯಾಗಿದೆ. ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಹೀಗಿರುವಾಗ ಶಾಸಕ ಮತ್ತು ಮಾಜಿ ಶಾಸಕರ ಕಿತ್ತಾಟ ಜನರಿಗೆ ಮನೋರಂಜನೆ ಒದಗಿಸುತ್ತಿದೆ.