ಅಪರಾಧ ಸುದ್ದಿ

ವಿ.ಸಿ.ನಾಲೆಗೆ ಕಾರು ಉರುಳಿ ಒಬ್ಬ ವ್ಯಕ್ತಿ ಸಾವು, ಇಬ್ಬರು ನಾಪತ್ತೆ

Share It

ಮಂಡ್ಯ: ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಬಳಿ ವಿ.ಸಿ. ನಾಲೆಗೆ ಕಾರು ಉರುಳಿಬಿದ್ದಿದ್ದು ಒಬ್ಬ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆಡಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರದಿಂದ ಮಂಡ್ಯ ಕಡೆಗೆ ಕಾರು ಬರುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ಕಾರು ವಿ.ಸಿ. ನಾಲೆಗೆ ಉರುಳಿಬಿದ್ದಿದೆ. ಈ ವೇಳೆ ಕಾರಿನಲ್ಲಿ ನಾಲ್ವರು ಇದ್ದರು ಎಂದು ಹೇಳಲಾಗುತ್ತಿದ್ದು, ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ವ್ಯಕ್ತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿನಲ್ಲಿ ಮತ್ತಿಬ್ಬರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಅವರಿಗಾಗಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮಂಡ್ಯ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮೃತಪಟ್ಟ ವ್ಯಕ್ತಿ ಮತ್ತು ಇತರರ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಫಯಾಜ್ ಮೃತಪಟ್ಟಿದ್ದು, ನಯಾಜ್ ಎಂಬಾತನನ್ನು ರಕ್ಷಣೆ ಮಾಡಲಾಗಿದೆ. ಅಸ್ಲಾಂಪಾಷಾ ಮತ್ತು ಮತ್ತೊಬ್ಬ ವ್ಯಕ್ತಿ ಕಾಣೆಯಾಗಿದ್ದು, ಅವರ ಪತ್ತೆಗೆ ಕಾರ್ಯಾಚರಣೆ ನಡೆದಿದೆ. ನೀರಿನಲ್ಲಿ ಕೊಚ್ಚಿಹೋಗಿರಬಹುದು ಎಂಬ ಶಂಕೆಯಿದ್ದು, ಅವರು ಸಾವನ್ನಪ್ಪಿದ್ದಾರಾ ಅಥವಾ ಎಲ್ಲಾದರೂ ತಪ್ಪಿಸಿಕೊಂಡು ಹೊರಗೆ ಬಂದಿದ್ದಾರಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇವರೆಲ್ಲರೂ ಮಂಡ್ಯದ ಹಾಲಹಳ್ಳಿ ಸ್ಲಂ ನಿವಾಸಿಗಳು ಎನ್ನಲಾಗಿದೆ.

ಸ್ಥಳಕ್ಕೆ ಮಂಡ್ಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಕುಮಾರ್ ಅವರು, ಏಕಕಾಲದಲ್ಲಿ 565 ಅಡಿಗಳನ್ನು ದೂರ ತಡೆಗೋಡೆ ನಿರ್ಮಾಣ ಕಷ್ಟ. ಹೀಗಾಗಿ, ಹಂತಹAತವಾಗಿ ತಡೆಗೋಡೆ ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ.


Share It

You cannot copy content of this page