ಮಂಡ್ಯ: ವಿ.ಸಿ.ನಾಲೆಯ ದುರ್ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿ ಮರಣವೊಂದಿದ್ದು, ಶವ ಕಾರಿನಲ್ಲಿಯೇ ಸಿಲುಕಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ.
ಮಂಡ್ಯ ಜಿಲ್ಲೆಯ ತಿಬ್ಬನಹಳ್ಳಿ ಬಳಿ ಇಂಡಿಕಾ ಕಾರೊಂದು ನಾಲೆಗೆ ಹಾರಿಬಿದ್ದಿತ್ತು. ಅದರಲ್ಲಿ ನಾಲ್ವರು ಇದ್ದರು ಎಂಬ ಮಾಹಿತಿ ಸಿಕ್ಕಿತ್ತು. ಒಬ್ಬ ವ್ಯಕ್ತಿಯನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿತ್ತಾದರೂ, ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದ.
ಇನ್ನಿಬ್ಬರು ನಾಪತ್ತೆಯಾಗಿರುವುದು ಕಂಡು ಬಂದ ಕಾರಣಕ್ಕೆ ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳೆಲ್ಲ ಆಗಮಿಸಿ, ಪರಿಶೀಲನೆ ನಡೆಸಿದ್ದರು. ಮತ್ತಿಬ್ಬರ ಪತ್ತೆಗಾಗಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯ ವೇಳೆ ನಾಲೆಯ 15 ಅಡಿ ಆಳದಲ್ಲಿ ದುರ್ಘಟನೆಗೆ ಬಲಿಯಾದ ಇಂಡಿಕಾ ಕಾರು ಪತ್ತೆಯಾಗಿತ್ತು. ಕಾರನ್ನು ಕ್ರೇನ್ ಮೂಲಕ ಸಿಬ್ಬಂದಿ ಮೇಲೆತ್ತುವ ಪ್ರಯತ್ನ ನಡೆಸಿದ್ದರು. ಒಂದು ಸಲ ಕಾರಿಗೆ ಕಟ್ಟಿದ್ದ ಹಗ್ಗವೂ ತುಂಡಾಗಿ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.
ಅಗ್ನಿಶಾಮಕ ಸಿಬ್ಬಂದಿ ಕಾರನ್ನು ಮೇಲೆತ್ತುತ್ತಿದ್ದಂತೆ ಕಾರಿನ ಹಿಂಬದಿ ಸೀಟಿನಲ್ಲಿಯೇ ಮತ್ತೊಬ್ಬ ವ್ಯಕ್ತಿ ಮರಣವೊಂದಿರುವುದು ಬೆಳಕಿಗೆ ಬಂದಿದೆ. ಸೀಟಿನ ಹಿಂಭಾಗದಲ್ಲಿ ಕುಳಿತುಕೊಂಡೇ ಉಸಿರುಗಟ್ಟಿ ಸಾವನ್ನಪ್ಪಿದ್ದು, ಆತನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಮತ್ತೊಬ್ಬ ವ್ಯಕ್ತಿಯ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.