RTO ಕಾರ್ಯಾಚರಣೆ: ಅನಧಿಕೃತವಾಗಿ ಸಂಚಾರ ಮಾಡುತ್ತಿದ್ದ ಐಷರಾಮಿ ಕಾರುಗಳು ಜಪ್ತಿ
ಬೆಂಗಳೂರು: ತೆರಿಗೆ ವಂಚಿಸಿ ಅನಧಿಕೃತವಾಗಿ ಚಲಿಸುತ್ತಿದ್ದ ಐಷರಾಮಿ ಕಾರುಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳ ದಾಳಿಯ ವೇಳೆ 30 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಬಿಎಂಡಬ್ಲೂ, ಬೆಂಜ್, ಪಾರ್ಶೆ, ರೇಂಜ್ ರೋವರ್ ಸೇರಿ ಅನೇಕ ಐಷರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ದೆಹಲಿ, ಪುದುಚೇರಿ, ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ಜಾರ್ಖಂಡ್ ಸೇರಿ ಹಲವು ರಾಜ್ಯಗಳಲ್ಲಿ ನೋಂದಣಿ ಮಾಡಿಸಿಕೊಂಡು, ರಾಜ್ಯದಲ್ಲಿ ತೆರಿಗೆ ವಂಚಿಸಿ ವಾಹನ ಚಲಾಯಿಸಲಾಗುತ್ತಿತ್ತು. ಸಾರಿಗೆ ಅಧಿಕಾರಿಗಳು ದಾಳಿ ನಡೆಸಿ, ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಈವರೆಗೆ ವಶಕ್ಕೆ ಪಡೆದಿರುವ ಕಾರುಗಳಿಂದ 3 ಕೋಟಿ ತೆರಿಗೆ ವಸೂಲಿಯಾಗಲಿದೆ ಎಂದು ಹೇಳಲಾಗಿದೆ. ತೆರಿಗೆ ಪಾವತಿ ಮಾಡುವವರಿಗೆ ಕಾರುಗಳು ಸಾರಿಗೆ ಇಲಾಖೆಯ ವಶದಲ್ಲಿರಲಿವೆ.


