ಸುದ್ದಿ

ಕಾವೇರಿ ಕುಂಭಮೇಳಕ್ಕೆ ಭರ್ಜರಿ ಸಿದ್ಧತೆ: 6 ಕೋಟಿ ಅನುದಾನ ಬಿಡುಗಡೆ ಮಾಡಿದ ಸರಕಾರ

Share It

ಬೆಂಗಳೂರು: ಕುಂಭಮೇಳ ಮಾದರಿಯಲ್ಲಿ ಕಾವೇರಿ ನದಿಯಲ್ಲಿ ನಡೆಯುವ ಟಿ.ನರಸೀಪುರ ಕುಂಭಮೇಳಕ್ಕೆ ಮುಜರಾಯಿ ಇಲಾಖೆ ವತಿಯಿಂದ 6 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.

ಈ ಸಂಬಂಧ ಮುಜರಾಯಿ ಮತ್ತು ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಮುತುವರ್ಜಿ ವಹಿಸಿ ಅನುದಾನ ಬಿಡುಗಡೆ ಮಾಡಿದ್ದಾರೆ. ಸುಮಾರು ಮೂರೂವರೆ ದಶಕದಿಂದಲೂ ಮೂರು ವರ್ಷಗಳಿಗೊಮ್ಮೆ ಕುಂಭಮೇಳವನ್ನು ತಿನರಸೀಪುರದಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ.

ಟಿ.ನರಸೀಪುರದ ತ್ರಿವೇಣಿ ಸಂಗಮ ದಕ್ಷಿಣಕಾಶಿಯಲ್ಲಿ ನಡೆಯುವ ಕುಂಭಮೇಳ ಭಾರತೀಯರಿಗೆ ಸನಾತನ ಸಂಸ್ಕೃತಿ ಮತ್ತು ದಿವ್ಯ ಜೀವನ ಧರ್ಮವನ್ನು ಸಾರುವ ಧಾರ್ಮಿಕ ಕಾರ್ಯಕ್ರಮವಾಗಿದೆ. ದಕ್ಷಿಣ ಭಾರತದಲ್ಲಿ ಈ ಪುಣ್ಯಸ್ನಾನ ಆರಂಭವಾಗಿದೆ.

ಆದಿಚುAಚನಗಿರಿ ಮಠದ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ತಿರುಚ್ಚಿ ಮಹಾಸಂಸ್ಥಾನದ ಶ್ರೀ ಜಯೇಂದ್ರಪುರಿ ಮಹಾ ಸ್ವಾಮಿ ಇವರೆಲ್ಲ ಸೇರಿ ಕುಂಭಮೇಳದ ಆಯೋಜನೆಗೆ ಶ್ರಮಿಸಿದರು.

ದಕ್ಷಿಣ ಭಾರತದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುವ ಸ್ಥಳ ಇದಾಗಿದೆ. ರಾಜ್ಯದ ವಿವಿಧ ಮಠಗಳು ಹಾಗೂ ದೇವಾಲಗಳಿಗೆ ಮುಖ್ಯಮಂತ್ರಿಗಳ ವಿಶೇಷ ಸಹಾಯಧನದ ಅನುದಾನದಲ್ಲಿ ೬ ಕೋಟಿ ರು.ಗಳ ಅನುದಾನವನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ.

ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಸಂಗಮದ ಪುಣ್ಯಕ್ಷೇತ್ರದಲ್ಲಿ ಫೆಬ್ರವರಿ 10 ರಂದು ನಡೆಯುವ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿ ಮತ್ತು ವಿಜೃಂಭಣೆಯಿAದ ನಡೆಸಲು ಸಕಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ತಿರುಮಕೂಡಲು ನರಸೀಪುರ ( ಟಿ. ನರಸೀಪುರ) ಇಲ್ಲಿ ಸೇರುವ ನದಿಗಳ ಸಂಗಮದಲ್ಲಿ ಕಾವೇರಿ, ಕಬಿನಿ ಮತ್ತು ಸ್ಪಟಿಕ ಸರೋವರದ ಸಂಗಮ ಸ್ಪಟಿಕ ಸರೋವರ ಇದು ಗುಪ್ತ ಗಾಮಿನಿಯಾಗಿದೆ ಎಂದು ಹೇಳಲಾಗುತ್ತದೆ.

ಮೂರು ದಿನಗಳ ಕಾಲ ನಡೆಯುವ ಕುಂಭಮೇಳಕ್ಕೆ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತರು, ಪ್ರವಾಸಿಗರು ಆಗಮಿಸುವುದಿಂದ ನರಸೀಪುರ ಪಟ್ಟಣದಲ್ಲಿಯೇ ಸಕಲ ಸೌಲಭ್ಯಗಳನ್ನು ಕಲ್ಪಿಸಲು ತಯಾರಿ ಮಾಡಿಕೊಳ್ಳಲು ಈ ಅನುದಾನ ಬಳಸಿಕೊಳ್ಳಲಾಗುವುದು.

ಕಳೆದ ಹನ್ನೊಂದು ಕುಂಭಮೇಳಗಳನ್ನು ಕರ್ನಾಟಕ ಸರ್ಕಾರ ಹಾಗೂ ರಾಜ್ಯದ ಎಲ್ಲಾ ಧರ್ಮಪೀಠಗಳ ನೇತೃತ್ವದಲ್ಲಿ ಸಾವಿರಾರು ಸಾಧು ಸಂತರು ಮತ್ತು ಲಕ್ಷಾಂತರ ಭಕ್ತಾದಿಗಳೊಂದಿಗೆ ಆಚರಿಸಿಕೊಂಡು ಬರಲಾಗುತ್ತಿದೆ. ಕೋವಿಡ್ ಕಾರಣದಿಂದಾಗಿ 2022 ರಲ್ಲಿ ನಡೆಯಬೇಕಿದ್ದ 12 ನೇ ಕುಂಭಮೇಳ ನಡೆಯಲಿಲ್ಲ.

ಪ್ರಸ್ತುತ ನಡೆಯಲಿರುವ ಮಹಾಕುಂಭಮೇಳವು 12 ನೇ ಕುಂಭಮೇಳವಾಗಿ, ಈ ಪುಣ್ಯಕ್ಷೇತ್ರದಲ್ಲಿ ನಾಡಿನ ಹಲವಾರು ಧಾರ್ಮಿಕ ಮುಖಂಡರು ಮತ್ತು ಸಾಧು ಸಂತರು ಹಾಗೂ ರಾಜ್ಯ ಸರ್ಕಾರದ ಸಚಿವರು, ಶಾಸಕರು ಮತ್ತು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.


Share It

You cannot copy content of this page