ಹೊಸದಿಲ್ಲಿ: ವಿಜಯೇಂದ್ರ ಹಿಂದೆ ಲಿಂಗಾಯತ ಸಮುದಾಯ ಉಳಿದಿಲ್ಲ. ಅವನ ಜತೆಗಿರೋದು ಕೆಲವು ಪೇಮೆಂಟ್ ಸ್ವಾಮೀಜಿಗಳು ಮಾತ್ರ. ಅವರಿಗೆ ಒಂದು ಲಕ್ಷ ಕೊಟ್ಟರೆ ಸಾಕು ಮಾತನಾಡ್ತಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ವಿಜಯೇಂದ್ರ ಪದಚ್ಯತುಗೆ ಪ್ಲ್ಯಾನ್ ಮಾಡುತ್ತಿರುವ ನಾಯಕರ ವಿರುದ್ಧ ಲಿಂಗಾಯತ ಅಸ್ತ್ರ ಪ್ರಯೋಗಕ್ಕೆ ಮುಂದಾದ ಬಿಎಸ್. ಯಡಿಯೂರಪ್ಪ ಮತ್ತು ವಿಜಯೇಂದ್ರ ನಡೆಗೆ ಕಿಡಿಕಾರಿದ ಯತ್ನಾಳ್, ಯಡಿಯೂರಪ್ಪ ಈಗ ಹೊಸ ಆಟ ಕಟ್ಟಲು ಮುಂದಾಗಿದ್ದಾರೆ. ಈಗ ಅವರ ಆಟವೆಲ್ಲ ನಡೆಯುವುದಿಲ್ಲ ಎಂದು ಗುಡುಗಿದ್ದಾರೆ.
ಲಿಂಗಾಯತ ಸಮುದಾಯ ಯಡಿಯೂರಪ್ಪ ಅವರ ಪರವಾಗಿಲ್ಲ, ವಿಜಯೇಂದ್ರ ಜತೆಗೆ ಕೆಲವು ಪೇಮೆಂಟ್ ಸ್ವಾಮೀಜಿಗಳು ಮಾತ್ರ ಇದ್ದು, ಒಂದು ಲಕ್ಷ ಕಾಣಿಕೆ ಕೊಟ್ಟರೆ ಸಾಕು ಮಾತನಾಡುತ್ತಾರೆ. ಲಿಂಗಾಯತ ಕೋಟಾ ಬಳಸಿ ರಾಜ್ಯಾಧ್ಯಕ್ಷ ಸ್ಥಾನ ಕೊಡುವುದಾದರೆ, ನಾನು ಸಿದ್ಧನಿದ್ದೇನೆ. ಸ್ಪರ್ಧಿಸಿ ಗೆದ್ದು ಬರುತ್ತೇನೆ ಎಂದು ತಿಳಿಸಿದರು.
ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಒತ್ತಾಯಿಸಿ, ಅನೇಕ ಅತೃಪ್ತ ನಾಯಕರು ಹೈಕಮಾಂಡ್ ಮುಂದೆ ಹಕ್ಕೊತ್ತಾಯ ಮಾಡಿದ್ದಾರೆ. ನೆನ್ನೆ ದೆಹಲಿಗೆ ಭೇಟಿ ಬೀಡಿದ್ದ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಶ್ರೀಮಂತ ಪಾಟೀಲ್ ಸೇರಿದಂತೆ ಕೆಲವು ನಾಯಕರು ವಿಜಯೇಂದ್ರ ಕೆಲಗಿಳಿಸಿ ಯಾರನ್ನೂ ಬೇಕಾದರೂ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎಂದು ಒತ್ತಾಯಿಸಿದ್ದರು.
ಇದೀಗ ಯತ್ನಾಳ್ ತಾನೂ ರಾಜ್ಯಾಧ್ಯಕ್ಷನಾಗಲು ಸಿದ್ಧ ಎಂಬ ಸಂದೇಶ ನೀಡಿದ್ದಾರೆ. ಈ ನಡುವೆ ಹೊಸಹೊಸ ಬಾಣಗಳ ಪ್ರಯೋಗ ಮಾಡುತ್ತಿದ್ದಾರೆ. ಜಾತಿ ಬೆಂಬಲ ಪಡೆದು ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನಕ್ಕೂ ಯತ್ನಾಳ್ ಕಲ್ಲುಹಾಕುತ್ತಿದ್ದು, ಲಿಂಗಾಯತ ಸಮುದಾಯದ ಬೆಂಬಲ ಯಡಿಯೂರಪ್ಪಗೆಷ್ಟಿದೆಯೋ
ನನಗೂ ಅಷ್ಟೇ ಇದೆ ಎಂದು ತಿಳಿಸಿದ್ದಾರೆ.