ಅತೃಪ್ತರ ದೆಹಲಿ ಯಾತ್ರೆಗೆ ಕೌಂಟರ್ ಕೊಡಲು ವಿಜಯೇಂದ್ರ ಬಣದ ಸಿದ್ಧತೆ
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಮತ್ತಷ್ಟು ಹೆಚ್ಚಾಗಿದ್ದು, ಇದೀಗ ದೆಹಲಿಯ ಅಂಗಳ ತಲುಪಿದೆ. ದೆಹಲಿಗೆ ಹೋಗಿದ್ದವರ ವಿರುದ್ಧ ತಿರುಗಿ ಬೀಳಲು ಬಿವೈ ವಿಜಯೇಂದ್ರ ಬಣ ಸಿದ್ಧತೆ ನಡೆಸಿದೆ.
ಬಿ.ಎಸ್.ಯಡಿಯೂರಪ್ಪ ಬೆಂಬಲಿಗ ಶಾಸಕರು, ಮಾಜಿ ಸಚಿವರು ಮತ್ತು ಶಾಸಕರು ಸೇರಿ ೨೦೦ಕ್ಕೂ ಹೆಚ್ಚು ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿದೆ.
ಸಭೆಯಲ್ಲಿ ಹೈಕಮಾಂಡ್ ನಾಯಕರಿಗೆ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ ವಿಜಯೇಂದ್ರ ಅವರ ಸಾಮರ್ಥ್ಯದ ಪರಿಚಯ ಮಾಡಿಸುವುದು ಮತ್ತು ದೆಹಲಿಗೆ ಹೋಗಿದ್ದ ರೆಬೆಲ್ ನಾಯಕರಿಗೆ ಎಚ್ಚರಿಕೆ ಸಂದೇಶ ಕೊಡುವ ಕೆಲಸ ನಡೆಯಲಿದೆ.
ಸಭೆಯ ಮೂಲಕ ಹೈಕಮಾಂಡ್ ನಾಯಕರಿಗೆ ವಿಜಯೇಂದ್ರ ಆಯ್ಕೆ ಸರಿಯಾಗಿದೆ ಎಂದು ಸ್ಪಷ್ಟಪಡಿಸುವುದು ಮತ್ತು ಅತೃಪ್ತರು ಮತ್ತು ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹೈಕಮಾಂಡ್ ಅನ್ನು ಒತ್ತಾಯಿಸುವುದು ಮುಖ್ಯ ಅಜೆಂಡಾವಾಗಲಿದೆ.
ಸಭೆಯನ್ನು ಕಟ್ಟಾ ಸುಬ್ರಮಣ್ಯಾ ನಾಯ್ಡು, ರೇಣುಕಾಚಾರ್ಯ ನೇತೃತ್ವದಲ್ಲಿ ಆಯೋಜನೆ ಮಾಡಲಾಗುತ್ತಿದೆ. ಸಭೆಯಲ್ಲಿ ಭಾಗವಿಸುವಂತೆ ಈಗಾಗಲೇ ಬಹುತೇಕ ಮಾಜಿ ಶಾಸಕರು ಮತ್ತು ಸಚಿವರುಗಳಿಗೆ ಕರೆ ಮಾಡಿ ಹೇಳಲಾಗುತ್ತಿದೆ.


