ನನಗೆ ಅವರಷ್ಟು ಅನುಭವ ಇಲ್ದೆ ಇರಬಹುದು..ಆದರೆ, ಕಾರ್ಯಕರ್ತನಾಗಿ ನಂದೇ ಆದ ಅನುಭವವಿದೆ: ಶ್ರೀರಾಮುಲುಗೆ ವಿಜಯೇಂದ್ರ ಟಾಂಗ್
ಬೆಂಗಳೂರು: ಬಿಜೆಪಿಯೊಳಗಿನ ಬಣ ಬಡಿದಾಟ ಹೆಚ್ಚಾಗುತ್ತಲೇ ಹೋಗುತ್ತಿದ್ದು ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಮಾತನಾಡಿದ್ದ ಶ್ರೀರಾಮುಲಿಗೆ ಬಿ.ವೈ.ವಿಜಯೇಂದ್ರ ಟಾಂಗ್ ನೀಡಿದ್ದಾರೆ.
ಶ್ರೀರಾಮುಲು ನನಗಿಂತ ಹಿರಿಯರಿರಬಹುದು. ಅವರು ನಮ್ಮ ತಂದೆಯವರ ಜತೆಗೆ ಸೇರಿ ಪಕ್ಷ ಕಟ್ಟಿದ್ದಾರೆ. ನನಗೆ ಅವರಷ್ಟು ಅನುಭವ ಇಲ್ಲದಿದ್ದರೂ, ನನಗೆ ನನ್ನದೇ ಆದ ಅನುಭವ ಹೊಂದಿದ್ದೇನೆ. ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸುವ ಸಾಮರ್ಥ್ಯ ನನ್ನಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ವಿಜಯೆಂದ್ರ ಅವರಿಗೆ ಅನುಭವ ಕಡಿಮೆ. ಅವರು ನಮ್ಮನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಮ್ಮ ಸಲಹೆ ತೆಗೆದುಕೊಂಡು ಮುನ್ನಡೆಯಬೇಕು ಎಂದು ಹೇಳಿದ್ದ ಶ್ರೀರಾಮುಲು ಅವರಿಗೆ ಟಾಂಗ್ ಕೊಡುವ ರೀತಿಯಲ್ಲಿ ವಿಜಯೇಂದ್ರ ಹೇಳಿಕೆ ನೀಡಿದ್ದು, ಶ್ರೀರಾಮುಲು ಸೇರಿದಂತೆ ಉಳಿದ ಬಂಡಾಯ ನಾಯಕರ ಬೆದರಿಕೆಗೆ ಸೊಪ್ಪು ಹಾಕುವುದಿಲ್ಲ ಎಂಬ ಸಂದೇಶ ಸಾರಿದ್ದಾರೆ.
ಈ ಮಾತುಗಳೊಂದಿಗೆ ಬಿಜೆಪಿಯ ಭಿನ್ನಮತ ಮತ್ತಷ್ಟು ತಾರಕ್ಕೇರುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಭಿನ್ನರೆಲ್ಲ ದೆಹಲಿಗೆ ಹೋಗಿ ಬಂದಿದ್ದಾರೆ. ವಿಜಯೇಂದ್ರ ಅವರನ್ನು ಕೆಳಗಿಳಿಸುವ ಪಣ ತೊಟ್ಟಿದ್ದಾರೆ. ಆದರೆ, ವಿಜಯೇಂದ್ರ ಮತ್ತು ಟೀಮ್ ಬಹಳ ವಿಶ್ವಾಸದಲ್ಲಿ ಅವರ ವಿರುದ್ಧ ಮುಗಿಬೀಳುತ್ತಿದೆ. ಹೀಗಾಗಿ, ಈ ಭಿನ್ನಮತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಅಂತೂ ಇದ್ದೇ ಇದೆ.


